ಬೆಂಗಳೂರು:ಚಂಡಮಾರುತ ಪರಿಣಾಮದಿಂದ ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆ ಅಬ್ಬರ ಸೋಮವಾರವೂ ಮುಂದುವರೆದಿದೆ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಮನೆ ಕುಸಿದಿರುವ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ವಲಯ ವ್ಯಾಪ್ತಿಯ ಮೈಸೂರು ಹೋರ ವರ್ತುಲ ರಸ್ತೆಯ ಪಿ.ಇ.ಎಸ್ ಕಾಲೇಜಿನ ಬಳಿಯಲ್ಲಿರುವ ವೀರಭದ್ರೇಶ್ವರ ನಗರದಲ್ಲಿ ಘಟನೆ ಸಂಭವಿಸಿದೆ.
ಗೋಪಾಲ್ ಎಂಬುವರಿಗೆ ಸೇರಿದ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ಹಾನಿ ಆಗಿವೆ. ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ ಎಂದು ಪಾಲಿಕೆ ಅಧಿಕಾರಿಗಳು ಪೊಲೀಸರು ಮಾಹಿತಿ ನೀಡಿದ್ದಾರೆ. ಪಕ್ಕದ ಅಪಾರ್ಟ್‌ಮೆಂಟ್‌ನ ತಡೆಗೋಡೆ ಸಮೇತ ಮನೆ ಕುಸಿದುಬಿದ್ದಿರುವ ಪರಿಣಾಮ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಅವಘಡದಲ್ಲಿ ಮತ್ತೆರಡು ಕಾರುಗಳಿಗೂ ಕೊಂಚ ಹಾನಿ ಆಗಿದೆ ಎಂದು ಹೇಳಿದ್ದಾರೆ.
ಪಾಲಿಕೆ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ:ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಜಲಮಂಡಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸಕೆರೆಹಳ್ಳಿಯ ಪುಪ್ಪಗಿರಿ ನಗರದಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ದತ್ತಾತ್ರೇಯ ನಗರ, ಗಿರಿನಗರದ 12ನೇ ಮುಖ್ಯ ರಸ್ತೆ ಸೇರಿ ಇತರ ಬಡಾವಣೆಗಳ ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದು, ಪಾಲಿಕೆ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರಿಗೆ ತೀವ್ರ ತೊಂದರೆ:ಬಾಪೂಜಿ ನಗರ, ಬ್ಯಾಂಕ್ ಕಾಲೋನಿ, ಶಾಂತಿ ನಗರ ಹಾಗೂ ರಿಚ್ಮಂಡ್ ರಸ್ತೆಯ ಅಂಚೆ ಕಚೇರಿ ಬಳಿ ಮರಗಳು ಉರುಳಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು, ಪೊಲೀಸರು ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಲಾಲ್‌ಬಾಗ್ ಪಶ್ಚಿಮ ದ್ವಾರದ ಮುಂಭಾಗದಲ್ಲಿ ಹಾಗೂ ಕದಿರನೇಹಳ್ಳಿಯ ಮುಖ್ಯ ರಸ್ತೆ, ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.