ಕರ್ನಾಟಕ

karnataka

ETV Bharat / state

ಹೆಚ್.​ಡಿ. ಕುಮಾರಸ್ವಾಮಿ, ಸಂಬಂಧಿಕರಿಂದ ಒತ್ತುವರಿ ಜಮೀನು ವಶಕ್ಕೆ ಪಡೆದ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಕಾಲಾಕಾಶ - HD Kumaraswamy land encroachment case

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇತರರಿಂದ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ವಶಕ್ಕೆ ಪಡೆಯುವ ಸಂಬಂಧ ವರದಿ ಸಲ್ಲಿಸಲು ಹೈಕೋರ್ಟ್ ಸರ್ಕಾರಕ್ಕೆ ನಿಗದಿತ ಕಾಲಾವಕಾಶ ನೀಡಿದೆ.

hourt-hearing-on-hd-kumaraswamy-land-encroachment-case
ಹೆಚ್​ಡಿ ಕುಮಾರಸ್ವಾಮಿ, ಸಂಬಂಧಿಕರಿಂದ ಒತ್ತುವರಿ ಜಮೀನು ವಶಕ್ಕೆ ಪಡೆದ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಹೈಕೋರ್ಟ್ ಕಾಲಾಕಾಶ

By

Published : Jun 16, 2023, 10:53 PM IST

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರಿಂದ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ವಶಕ್ಕೆ ಪಡೆಯಲು ಸೂಚಿಸಿದ ನ್ಯಾಯಾಲಯದ ಆದೇಶದ ಅನುಪಾಲನಾ ವರದಿ ಸಲ್ಲಿಸಲು ಸರ್ಕಾರಕ್ಕೆ ಜುಲೈ 7ರವರೆಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಕುಟುಂಬಸ್ಥರಿಂದ ಕಬಳಿಕೆಯಾಗಿದ್ದ ಒತ್ತುವರಿ ಜಮೀನು ವಶಕ್ಕೆ ಪಡೆಯಲು ಸೂಚಿಸಿದ್ದ ಹೈಕೋರ್ಟ್ ಆದೇಶ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಒತ್ತುವರಿ ತೆರವು ಮಾಡುವಂತೆ ಸೂಚಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಅವರು ಉತ್ತರಿಸಿ, ತಾವು ಸರ್ಕಾರಿ ಜಮೀನು ಒತ್ತುವರಿ ಮಾಡಿಲ್ಲ. ಭೂಮಿಯನ್ನು ಕೆಲವರಿಗೆ ಸರ್ಕಾರ ಮಂಜೂರು ಮಾಡಿದೆ. ಅವರಿಂದ ತಾವು ಖರೀದಿ ಮಾಡಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ. ಆ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾಯಿತು. ಆದರೆ, ದಾಖಲೆಗಳು ಸದ್ಯ ನಾಶವಾಗಿವೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಮತ್ತು ಹೈಕೋರ್ಟ್‌ನ ಹಿಂದಿನ ಆದೇಶಗಳ ಅನುಪಾಲನಾ ವರದಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಈ ಹೇಳಿಕೆ ಒಪ್ಪದ ನ್ಯಾಯಪೀಠ, ದಾಖಲೆಗಳು ನಾಶವಾಗಿವೆ ಎಂದರೆ ಏನರ್ಥ? ಸರ್ಕಾರಿ ಭೂಮಿ ಮತ್ತು ದಾಖಲೆಗಳಿಗೆ ಸರ್ಕಾರವೇ ಕಸ್ಟೋಡಿಯನ್ ಆಗಿರುತ್ತದೆ. ದಾಖಲೆಗಳು ನಾಶವಾಗಿವೆ ಎಂದು ಹೇಳಿದರೆ ಒಪ್ಪಲಾಗದು. ಸರ್ಕಾರದ ಎಷ್ಟು ಜಮೀನು ಒತ್ತುವರಿಯಾಗಿದೆ. ಅದರಲ್ಲಿ ಎಷ್ಟು ಜಮೀನನ್ನು ಸರ್ಕಾರ ಮತ್ತೆ ವಶಕ್ಕೆ ಪಡೆದಿದೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಅದರಂತೆ ಹೈಕೋರ್ಟ್ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ಏನೆಲ್ಲಾ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಅಗತ್ಯ ಕ್ರಮ ಜರುಗಿಸಲಿದೆ ಎಂದು ಮೌಖಿಕವಾಗಿ ತಿಳಿಸಿ ಅನುಪಾಲನಾ ವರದಿ ಸಲ್ಲಿಸಲು ಜುಲೈ 7ರವರೆಗೆ ಕಾಲಾವಕಾಶ ನೀಡಿದೆ.

ಅರ್ಜಿಯು ಈ ಹಿಂದೆ ನಡೆದ ವಿಚಾರಣೆ ಸಂದರ್ಭದಸಲ್ಲಿ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿ, ಕೇತಗಾನಹಳ್ಳಿಯ ಸರ್ವೇ ನಂ 8, 9, 10, 16/1, 16/8, 16/24 ಹಾಗೂ 79ರಲ್ಲಿನ ಒಟ್ಟು 14 ಎಕರೆ 4 ಗುಂಟೆ ಜಾಗವನ್ನು ಸರ್ಕಾರ ವಶಕ್ಕೆ ಪಡೆದಿದೆ. ಇಡೀ ಜಾಗಕ್ಕೆ ತಂತಿಬೇಲಿ ಅಳವಡಿಸಲಾಗಿದೆ. ಉಳಿದಂತೆ ಸಂಬಂಧಪಟ್ಟವರಿಗೆ ಒತ್ತುವರಿ ತೆರವು ನೋಟಿಸ್ ನೀಡಲಾಗಿತ್ತು. ತಾವು ಯಾವುದೇ ಸರ್ಕಾರಿ ಜಮೀನಿನ ಭಾಗ ಒತ್ತುವರಿ ಮಾಡಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಅದನ್ನು ಆಕ್ಷೇಪಿಸಿದ್ದ ಅರ್ಜಿದಾರರ ವಕೀಲರು, ಪ್ರಕರಣದಲ್ಲಿ ಒಟ್ಟು 71 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆಯೇ ಹೊರತು 14 ಎಕರೆ 4 ಗುಂಟೆಯಲ್ಲ. ಈ ಕುರಿತು 2014ರ ಆಗಸ್ಟ್ 4ರಂದು ಲೋಕಾಯುಕ್ತ ಸಂಸ್ಥೆ ನೀಡಿದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಲೋಕಾಯುಕ್ತ ವರದಿ ಜಾರಿಗೊಳಿಸಲಾಗುವುದು ಎಂಬುದಾಗಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ, ಈವರೆಗೂ ಒತ್ತುವರಿಯಾದ ಜಮೀನು ಸರ್ಕಾರಕ್ಕೆ ವಶಕ್ಕೆ ಪಡೆದಿಲ್ಲ ನ್ಯಾಯಪೀಠಕ್ಕೆ ವಿವರಿಸಿದ್ದರು.

ABOUT THE AUTHOR

...view details