ಬೆಂಗಳೂರು: ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಹೊಳೆಯಂತಾಗಿವೆ. ಅದರಲ್ಲೂ ಐಟಿ-ಬಿಟಿ ಪರಿಸರವಾದ ಮಹದೇವಪುರದಲ್ಲಿ ಅಪಾರ್ಟ್ಮೆಂಟ್ಗಳು, ವಿಲ್ಲಾಗಳು, ಐಷಾರಾಮಿ ಬಡಾವಣೆಗಳಲ್ಲಿ ಮಳೆನೀರು ತುಂಬಿ ತುಳುಕುತ್ತಿದೆ. ಇಲ್ಲಿನ ಹಲವು ನಿವಾಸಿಗಳು ಜೀವ ಉಳಿಸಿಕೊಳ್ಳಲು ಮನೆಗಳನ್ನು ತೊರೆದು ಹೋಟೆಲ್ಗಳ ಮೊರೆ ಹೋಗುತ್ತಿದ್ದಾರೆ. ಇದರ ದುರ್ಲಾಭ ಪಡೆದುಕೊಳ್ಳುತ್ತಿರುವ ಹೋಟೆಲ್ ಮತ್ತು ಲಾಡ್ಜ್ಗಳು ಜನರಿಂದ ದುಪ್ಪಟ್ಟು ಹಣ ಪೀಕುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.
ಸರ್ಜಾಪುರ, ಯಮಲೂರು ಬೆಳ್ಳಂದೂರು ಭಾಗಗಳಲ್ಲಿ ಹೆಚ್ಚಾಗಿ ಶ್ರೀಮಂತ ಕುಟುಂಬಗಳು ವಾಸವಾಗಿವೆ. ಇಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಈ ಭಾಗದ ಜನರು ಹೋಟೆಲ್ಗಳ ಮೊರೆ ಹೋಗಿದ್ದಾರೆ. ಆದರೆ ಸಂಕಷ್ಟದ ಸಮಯದಲ್ಲೂ ಹೋಟೆಲ್ ಮಾಲೀಕರು ಸ್ಪಂದಿಸದೆ ದುಡ್ಡು ಪೀಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅನೇಕ ಹೋಟೆಲ್‌ಗಳು ಸಾಕು ಪ್ರಾಣಿಗಳೊಂದಿಗೆ ಅತಿಥಿಗಳನ್ನು ಒಳಸೇರಿಸಲು ನಿರಾಕರಿಸುತ್ತಿದ್ದಾರಂತೆ. ಇದು ರೂಂಗಳಿಗೆ ಬೇಡಿಕೆ ಮತ್ತು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಮುಂದಿನ 10-15 ದಿನಗಳವರೆಗೆ ರೂಂ ಬುಕ್ಕಿಂಗ್:ಮಹದೇವಪುರ ವ್ಯಾಪ್ತಿಯ ವೈಟ್‌ಫೀಲ್ಡ್, ಔಟರ್ ರಿಂಗ್ ರೋಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಕುಂದಲಹಳ್ಳಿ, ಮಾರತಹಳ್ಳಿಯ ಕೆಲವು ಹೋಟೆಲ್ನ ಕೊಠಡಿಗಳು ಈಗಾಗಲೇ ಫುಲ್ ಆಗಿದೆ. ದುಪ್ಪಟ್ಟು ಹಣ ನೀಡಲು ಸಿದ್ದರಿದ್ದರೂ ರೂಂಗಳು ದೊರೆಯುತ್ತಿಲ್ಲ ಎಂದು ತಿಳಿದುಬಂದಿದೆ.