ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ದೂರದ ದೇಶದಲ್ಲಿ ನಡೆಯುತ್ತಿರುವ ಯುದ್ಧ ರಾಜ್ಯದ ಮೇಲೂ ಸಹ ಪರಿಣಾಮ ಬೀರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ದೇಶದಲ್ಲಿ ರಾಕೆಟ್ ವೇಗದಲ್ಲಿ ಅಡುಗೆ ಎಣ್ಣೆ ದರ ಏರುತ್ತಲ್ಲೇ ಇದೆ. ಹೀಗಾಗಿ, ಏಪ್ರಿಲ್ನಿಂದ ಹೋಟೆಲ್ಗೆ ಹೋಗುವ ಮುನ್ನ ಜೇಬಿನಲ್ಲಿ ಹಣ ಇದೆಯಾ ಅಂತಾ ನೋಡಿಕೊಂಡು ಹೋಗುವಂತಾಗಿದೆ. ಹೋಟೆಲ್ಗಳಲ್ಲಿ ಏಪ್ರಿಲ್ 1ರಿಂದಲೇ ದರ ಏರಿಕೆ ಮಾಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
ದರ ಏರಿಕೆ ಮಾಹಿತಿ ನೀಡಿದ ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೋಟೆಲ್ ದರ ಹೆಚ್ಚಳದ ಸುಳಿವನ್ನ ಈಗಾಗಲೇ ಹೋಟೆಲ್ ಮಾಲೀಕರ ಸಂಘ ನೀಡಿದ್ದು, ಮಾರ್ಚ್ ಕೊನೆಯ ವಾರದಲ್ಲಿ ಅಡುಗೆ ಎಣ್ಣೆ ದರದಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಅಡುಗೆ ಎಣ್ಣೆ ಏರಿಕೆ ಎಫೆಕ್ಟ್ನಿಂದ ಹೋಟೆಲ್ ನಡೆಸಲು ಅಸಾಧ್ಯವಾದ ಹಿನ್ನೆಲೆ ಮುಂದಿನ ತಿಂಗಳಿಂದ ಹೋಟೆಲ್ ತಿಂಡಿ, ತಿಸಿಸುಗಳು ದುಬಾರಿ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಈಗಾಗಲೇ ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ, ರೈಸ್ ಬ್ರಾನ್ ಆಯಿಲ್ ಭಾರಿ ಏರಿಕೆ ಕಂಡಿದೆ. ಹೀಗಾಗಿ, ಫುಲ್ ಮೀಲ್ಸ್, ದೋಸೆ,ಇಡ್ಲಿ, ವಡೆ ಕೇಸರಿ ಬಾತ್, ಉಪ್ಪಿಟ್ಟು, ಮುಂತಾದ ತಿಂಡಿಗಳು ದುಬಾರಿಯಾಗಲಿದೆ.
ಯಾವ ಯಾವ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ?
- ಮಸಾಲೆ ದೋಸೆ 75 ರಿಂದ 80 ರೂ. ಏರಿಕೆ
- ಇಡ್ಲಿ, ವಡೆ 40 ರೂ. ರಿಂದ 45 ರೂ.ಗೆ ಏರಿಕೆ
- ಕಾಫಿ, ಟೀ ಬೆಲೆ 15 ರಿಂದ 20 ರೂ.ಗೆ ಏರಿಕೆ
- ಚೌಚೌ ಬಾತ್ 70 ರೂ. 75 ರೂ. ಏರಿಕೆ
- ಸೌಥ್ ಇಂಡಿಯನ್ ಊಟ 95 ರೂ. ಯಿಂದ 100 ರೂ.
- ರೈಸ್ ಬಾತ್ 40 ರಿಂದ 50 ರೂ.ಗೆ ಹೆಚ್ಚಳ
- ರವಾ ಇಡ್ಲಿ 45 ರೂ. ಯಿಂದ 50ಕ್ಕೆ ಏರಿಕೆ
- ಅಕ್ಕಿ ರೊಟ್ಟಿ 45 ರಿಂದ 50 ರೂ.ಗೆ ಏರಿಕೆ
- ಫ್ರೈಡ್ ರೈಸ್ 100 ರಿಂದ 110 ರೂ.ಗೆ ಏರಿಕೆ
- ಗೋಬಿ ಮಂಚೂರಿ 100 ರಿಂದ 110 ರೂ.ಗೆ ಏರಿಕೆ
- ಪನ್ನೀರ್ ಮಂಚೂರಿ 110 ರಿಂದ 120 ರೂ.ಗೆ ಹೆಚ್ಚಳ
- ಒಂದು ಪ್ಲೇಟ್ ಪೂರಿ 70 ರೂ. ಯಿಂದ 75 ರೂ.ಗೆ ಏರಿಕೆ ಸಾಧ್ಯತೆ
ತುಟಿ ಸುಡಲಿದೆ ಕಾಫಿ, ಟೀ :ಇತ್ತ ರಾಜ್ಯದಲ್ಲಿ ಹಾಲಿನ ದರವೂ ಏರಿಕೆ ಆಗುವ ಸಾಧ್ಯತೆ ಇದೆ. ಅಧಿವೇಶನ ಮುಗಿದ ಬೆನ್ನಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ಲೀಟರ್ಗೆ 2 ರೂ. ಹಾಲಿನ ಪರಿಷ್ಕರಣೆ ಆಗಲಿದೆ. ಏಪ್ರಿಲ್ ತಿಂಗಳಲ್ಲಿ ಹಾಲಿನ ದರ ಪರಿಷ್ಕರಣೆ ಆಗೋದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಹಾಲಿನ ದರ ಪರಿಷ್ಕರಣೆ ಮಾಡುವಂತೆ ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳು ಸಿಎಂಗೆ ಮನವಿ ಮಾಡಿವೆ.
ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಹಾಲಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಆದ್ರೆ, ಈ ಬಾರಿ ಹಾಲು ಒಕ್ಕೂಟಗಳ ಮನವಿ ಆಧರಿಸಿ ಹಾಲಿನ ದರ ಪರಿಷ್ಕರಣೆಗೆ ಸರ್ಕಾರ ತೀರ್ಮಾನ ಮಾಡಿದೆ. 14 ಹಾಲು ಒಕ್ಕೂಟಗಳ ಒತ್ತಡಕ್ಕೆ ಮಣಿದು ಹಾಲಿನ ದರ ಪರಿಷ್ಕರಣೆ ಮಾಡುವ ಎಲ್ಲ ಸಾಧ್ಯತೆ ಇದೆ. ನಿರ್ವಹಣೆ, ಉತ್ಪಾದನೆ ವೆಚ್ಚ,ನೌಕರರ ಸಂಬಳ, ಸಾಗಾಣಿಕೆ ವೆಚ್ಚ ಹೆಚ್ಚಳ ಹಿನ್ನೆಲೆ ದರ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಪಟ್ಟು ಹಿಡಿವೆ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ:'ಡಾಕ್ಟರ್ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್ ಕಣೋ': ನವೀನ್ ತಾಯಿಯ ಅಳಲು