ಕರ್ನಾಟಕ

karnataka

ETV Bharat / state

ಬಿಎಸ್​ವೈ ಸರ್ಕಾರ ಬೀಳಲ್ಲ, ಸರ್ಕಾರ ಬೀಳಿಸಲು ಮೂರೂ ಪಕ್ಷದ ಶಾಸಕರಿಗೂ ಇಷ್ಟವಿಲ್ಲ: ಹೊರಟ್ಟಿ - horatti statement latest news

ಉಪ‌ ಚುನಾವಣೆ ನಂತರವೂ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಜೆಡಿಎಸ್​ ನಾಯಕ ಬಸವರಾಜ ಹೊರಟ್ಟಿ ಮಾತನಾಡಿದರು.

By

Published : Nov 19, 2019, 6:40 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ‌ ಸರ್ಕಾರ ಬೀಳಲ್ಲ. ಸರ್ಕಾರ ಬೀಳಿಸುವುದಕ್ಕೆ ಯಾರಿಗೂ ಇಷ್ಟ ಇಲ್ಲ. ಉಪ‌ ಚುನಾವಣೆ ನಂತರವೂ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಜೆಡಿಎಸ್​ ನಾಯಕ ಬಸವರಾಜ ಹೊರಟ್ಟಿ

ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ. ಹೀಗಾಗಿ ಯಾವುದೋ ಕೆಲಸದ ನಿಮಿತ್ತ ಅವರನ್ನು ಭೇಟಿ ಮಾಡಿದ್ದೆ.‌ ಇವಾಗ ಜೆಡಿಎಸ್ ಶಾಸಕಾಂಗ ಸಭೆ ಇದೆ, ಹೋಗುತ್ತಿದ್ದೇನೆ. ಸಿಎಂ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಉಪ ಚುನಾವಣೆ ಬಳಿಕ ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡುವ ವಿಚಾರ ಸಂಬಂಧ ಕುಮಾರಸ್ವಾಮಿ ಮತ್ತು ದೇವೇಗೌಡರ ಮಾತನ್ನು ಆಧಾರವಾಗಿ ಇಟ್ಟುಕೊಂಡು ನಾನು ಹೇಳಿದ್ದೇನೆ‌. ಹೀಗಾಗಿ ಉಪ‌ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲದೆ ಇದ್ದರೆ ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡಬಹುದು ಎಂದು ಹೇಳಿದ್ದೇನೆ ಅಷ್ಟೇ. ಈಗಲೂ ಕೂಡ ನಾನು ಅದೇ ಮಾತನ್ನು ಹೇಳುತ್ತೇನೆ ಎಂದು ನಿನ್ನೆ ನೀಡಿದ್ದ ತಮ್ಮ ಹೇಳಿಕೆಯನ್ನು ಹೊರಟ್ಟಿ ಸಮರ್ಥಿಸಿಕೊಂಡರು.

ನಿನ್ನೆ ಮತ್ತೆ ಕುಮಾರಸ್ವಾಮಿ ಯು ಟರ್ನ್ ಹೊಡೆದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆ ನಂತರ ರಾಜಕೀಯ ಬದಲಾವಣೆಯಾಗಲಿದೆ ಎಂದಿದ್ದಾರೆ. ಉಪ ಚುನಾವಣೆ ನಂತರ ಹಿಂಗೂ ಆಗಬಹುದು, ಹಂಗೂ ಆಗಬಹುದು. ಆದರೆ ಸರ್ಕಾರ ಬೀಳೋಕೆ ಬಿಡಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮೂರೂ ಪಕ್ಷದ ಶಾಸಕರಿಗೂ ಸರ್ಕಾರ ಬೀಳುವುದು ಇಷ್ಟವಿಲ್ಲ. ಮತ್ತೆ ಚುನಾವಣೆಗೆ ಹೋಗಲು ಯಾರೂ ಸಿದ್ಧರಿಲ್ಲ. ಹೇಗಾದರೂ ಸರಿ ಶಾಸಕರಾಗಿ ಇರಬೇಕು ಎನ್ನುವ ನಿಲುವು ತಳೆದಿದ್ದಾರೆ ಎಂದರು.

ಎಂಎಲ್ಸಿಗಳಿಗೆ ಹೆಚ್​ಡಿಕೆ ಚಾಕೊಲೇಟ್​​ ನೀಡಿದ್ದಾರೆ:ಕುಮಾರಸ್ವಾಮಿ ಮೇಲೆ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನಮ್ಮನ್ನು ಸರಿಯಾಗಿ ಕಾಣುತ್ತಿಲ್ಲ ಎನ್ನುವ ಅಸಮಾಧಾನ ಇತ್ತು. ಈಗ ಅವರು ನಮ್ಮ ಜೊತೆ ಮಾತನಾಡಿದ್ದಾರೆ. ಜೊತೆಗೆ ಅದೊಂದು ಕೆಟ್ಟ ಘಳಿಗೆ ಮರೆತು ಬಿಡಿ ಎಂದು ಹೇಳಿದ್ದಾರೆ. ಹೀಗಾಗಿ ಅವರ ಮೇಲಿನ ನಮ್ಮ ಅಸಮಾಧಾನ ತಣ್ಣಗಾಗಿದೆ. ಮಕ್ಕಳು ಅತ್ತಾಗ ಚಾಕೊಲೇಟ್​ ಕೊಡ್ತಾರಲ್ಲ ಹಾಗೆ ನಮ್ಮ ಕಥೆ. ಇವಾಗ ನಮಗೆ ಅವರು ಚಾಕೊಲೇಟ್ ಕೊಟ್ಟಿದ್ದಾರೆ. ನಾವು ಚಾಕೊಲೇಟ್ ಪಡೆದು ಸೈಲೆಂಟ್ ಆಗಿದ್ದೇವೆ ಎಂದರು.

ABOUT THE AUTHOR

...view details