ಬೆಂಗಳೂರು:ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನೂತನ ಶಾಸಕರನ್ನು ಅಭಿನಂದಿಸಲಾಯಿತು. ಮಸ್ಕಿ ಶಾಸಕ ಬಸನಗೌಡ ತುರುವಿಹಾಳ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಡಿ.ಕೆ.ಶಿವಕುಮಾರ್ ಮಾತನಾಡಿ, ಮಸ್ಕಿ ಗೆಲುವು ಇಡೀ ರಾಷ್ಟ್ರದ ಕಾಂಗ್ರೆಸ್ ಗೆಲವು. ನಿಮ್ಮ ಒಗ್ಗಟ್ಟು ಹೀಗೆಯೇ ಇರಲಿ, ಮೈಮರೆಯಬೇಡಿ. ಈಗಾಗಲೇ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿನ ಪರಿಸ್ಥಿತಿ ಬಗ್ಗೆ ವರದಿ ಕೊಡುತ್ತಿದ್ದಾರೆ. ಹೀಗಾಗಿ ಗೆಲುವಿನಲ್ಲಿ ಮೈರೆಯಬೇಡಿ. ಮುಂದೆ ಒಗ್ಗಟ್ಟಾಗಿ ವಿಧಾನಸಭೆ ಚುನಾವಣೆ ಗೆಲ್ಲೋಣ ಎಂದು ರಾಯಚೂರು ನಾಯಕರಿಗೆ ಕಿವಿಮಾತು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭ ಮಸ್ಕಿಯಲ್ಲಿ ನೀವು ಬಹಳ ಶ್ರಮ ಪಟ್ಟಿದ್ದೀರಾ. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಳಗಾವಿಯಲ್ಲಿ ಸ್ವಲ್ಪದರಲ್ಲಿ ಎಡವಿದ್ದೇವೆ. ನಮ್ಮ ಕ್ಯಾಂಡಿಡೇಟ್ಗೆ ಬಹಳ ನಿರೀಕ್ಷೆ ಇತ್ತು. ಕ್ಷೇತ್ರ ಅವರದ್ದೇ ಆಗಿತ್ತು. ಹಾಗಾಗಿ ವಿಶ್ವಾಸವಿತ್ತು. ಬಹಳ ಕೆಲಸ ಮಾಡಿದ್ದರು. ಕಾರ್ಯಕರ್ತರು, ಮುಖಂಡರು ಕೆಲಸ ಮಾಡಿದ್ದರು. ಆದರೆ ಕಡಿಮೆ ಮಾರ್ಜಿನ್ನಲ್ಲಿ ಸೋಲಬೇಕಾಯ್ತು. ಇರಲಿ, ರಾಷ್ಟ್ರಕ್ಕೆ ಒಂದು ದೊಡ್ಡ ಸಂದೇಶ ಹೋಗಿದೆ. ನಮ್ಮ ಶಕ್ತಿ ಏನೆಂದು ತೋರಿಸಿಕೊಟ್ಟಿದ್ದೇವೆ ಎಂದರು.
ಬಸವಕಲ್ಯಾಣದಲ್ಲೂ ಗೆಲ್ಲುವ ಅವಕಾಶವಿತ್ತು. ಅಲ್ಲಿನ ನಮ್ಮ ನಾಯಕರು ಆಸ್ಪತ್ರೆ ಸೇರಿಬಿಟ್ರು. ಹಾಗಾಗಿ ಅಲ್ಲಿ ಸೋಲಬೇಕಾಯ್ತು. ಸೋಲಿನ ಬಗ್ಗೆ ತಿಳಿಯಲು ಒಂದು ತಂಡ ಕಳಿಸ್ತೇನೆ. ಅಲ್ಲಿನ ಮಾಹಿತಿಯನ್ನ ಪಡೆದುಕೊಳ್ತೇನೆ. ಮುಂದೆ ನಮಗೆ ಉಪಯೋಗ ಆಗಲಿದೆ. ಪ್ರತಿ ಅಸೆಂಬ್ಲಿ ಕ್ಷೇತ್ರಕ್ಕೆ ನಮ್ಮದು ಒಂದು ಟೀಂ ಕಳಿಸಿದ್ದೇನೆ. ಪ್ರತಿ ಕ್ಷೇತ್ರದಿಂದ ಮಾಹಿತಿ ತರಿಸಿಕೊಳ್ತಿದ್ದೇನೆ. ಸರಿಯಾಗಿ ಕ್ಷೇತ್ರದಲ್ಲಿ ಶಿಸ್ತು ಪಾಲಿಸದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಶಿಸ್ತಿಗೆ ನಾವು ಒತ್ತು ಕೊಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಎಚ್ಚರಿಕೆ ನೀಡಿದರು.
ಕೇಂದ್ರದಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ವಿಚಾರವಾಗಿ ಮಾತನಾಡಿ, ಉಚಿತ ಲಸಿಕೆ ನೀಡುವಂತೆ ಹೋರಾಟ ಮಾಡಿದ್ದೆವು. ಕಾಂಗ್ರೆಸ್ ಪಕ್ಷ ಅಭಿಯಾನ ಮಾಡಿತ್ತು. ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಜತೆಗೆ ಸುಪ್ರೀಂ ಕೋರ್ಟ್ ಇಂದು ನ್ಯಾಯ ಕೊಡಿಸಿದೆ. ಸುಪ್ರೀಂ ಕೋರ್ಟ್ಗೆ ನಾವೆಲ್ಲರೂ ತಲೆಬಾಗಬೇಕಿದೆ. ಜನರ ಜೀವ ಉಳಿಸಲು ಸುಪ್ರೀಂ ಮುಂದಾಗಿದೆ. ಕೇಂದ್ರಕ್ಕೆ ಎಚ್ಚರಿಕೆಯನ್ನ ರವಾನಿಸಿತ್ತು. ಹಾಗಾಗಿ ಇಂದು ಲಸಿಕೆ ನೀಡಲು ಕೇಂದ್ರ ಮುಂದಾಗಿದೆ ಎಂದರು.
ಇದನ್ನೂ ಓದಿ :ಸಿಎಂ ಯಾವ ಆ್ಯಂಗಲ್ನಲ್ಲಿ ರಾಜೀನಾಮೆ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ: ಭೈರತಿ ಬಸವರಾಜ್
ಇನ್ನೂ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸದೇ ಮೌನವಾಗಿ ಉಳಿದರು. ಕಡೆಗೆ ಡಿ.ಕೆ.ಶಿವಕುಮಾರ್ ಬಿಜೆಪಿಯ ಮೆಂಬರ್ಶಿಪ್ ತೆಗೆದುಕೊಳ್ಳಲಿ ಎಂಬ ಯೋಗೇಶ್ವರ್ ಹೇಳಿಕೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸದೆ ಹಿಂದೆ ತಿರುಗಿ ಹೊರಟೇ ಹೋದರು.