ಬೆಂಗಳೂರು:ಕೊರೊನಾ ಸೋಂಕಿತ ಬಿಹಾರ ಮೂಲದ ಕಟ್ಟಡ ಕಾರ್ಮಿಕನಿಂದ ಹೊಂಗಸಂದ್ರದ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಬೊಮ್ಮನಹಳ್ಳಿಯ ಹೊಂಗಸಂದ್ರವನ್ನು ಇದೀಗ ರೆಡ್ ಝೋನ್ಗೆ ಸೇರಿಸಲಾಗಿದ್ದು, ಸಂಪೂರ್ಣ ಸೀಲ್ಡೌನ್ ಮಾಡಲಾಗುತ್ತಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದು, ಬಡಾವಣೆಗಳಲ್ಲಿ ಹೈಪೋಕ್ಲೋರೈಡ್ ಸಿಂಪಡಣೆ ಮಾಡುತ್ತಿದ್ದಾರೆ.
ಇನ್ನು ಏಪ್ರಿಲ್ 18ರಂದು ಹೊಂಗಸಂದ್ರದ ವೇಣು ಹೆಲ್ತ್ಕೇರ್ ಸೆಂಟರ್‌ಗೆ ಬಂದಿದ್ದ ಬಿಹಾರ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ನೀಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಕೊರೊನಾ ಸೋಂಕಿತ ಬಂದಿದ್ದನೆಂಬ ಮಾಹಿತಿಯನ್ನು ಮುಚ್ಚಿಟ್ಟಿದ್ದಕ್ಕಾಗಿ, ವೇಣು ಹೆಲ್ತ್ಕೇರ್ ಸೆಂಟರ್‌ನ ಪರವಾನಗಿಯನ್ನುಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಇದೇ ವೇಳೆ ಆ ವ್ಯಕ್ತಿಯು, ನಗರದ ಮೂರು ಆಸ್ಪತ್ರೆಗಳಿಗೆ ಒಂದೇ ಆಟೋದಲ್ಲಿ ತೆರಳಿದ್ದನು. ಆತ ಪ್ರಯಾಣಿಸಿದ್ದ ಆಟೋದ ಚಾಲಕನನ್ನು ಕ್ವಾರಂಟೈನ್ ಮಾಡಲಾಗಿದ್ದು, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಹೊಂಗಸಂದ್ರದಲ್ಲಿ 09 ಮಂದಿಗೆ ಕೊರೊನಾ ಪಾಸಿಟಿವ್ ಕಳೆದ ಮಾರ್ಚ್ 23ರಂದು ಆಟೋದಲ್ಲಿ ಮನೆ ಮಾಲೀಕನಿಗೆ ತರಕಾರಿ ಪೂರೈಸಿದ್ದಾನೆ. ಏಪ್ರಿಲ್ 18ರಂದು ವೇಣು ಹೆಲ್ತ್ಕೇರ್ಗೆ ಆಟೋದಲ್ಲಿ ತೆರಳಿ ಪರೀಕ್ಷೆ ಮಾಡಿಸಿಕೊಂಡು ಮರುದಿನ ಜಯದೇವ ಆಸ್ಪತ್ರೆಗೆ ಹಾಗೂ ಏಪ್ರಿಲ್ 20ರಂದು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾನೆ. ಅದೇ ದಿನದಂದು ಕಾರ್ಮಿಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಾಲ್ಕು ಬಾರಿಯೂ ಕಾರ್ಮಿಕ ಒಂದೇ ಆಟೋ ಬಳಸಿದ್ದನು. ಇದೀಗ ಆಟೋ ಡ್ರೈವರ್ನ ವೈದ್ಯಕೀಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇದಲ್ಲದೇ ಕಾರ್ಮಿಕನಿಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ, ಎಚ್ಚೆತ್ತಕೊಂಡು ಜಿಲ್ಲಾ ಆರೋಗ್ಯಧಿಕಾರಿಗಳ ತಂಡ ಈ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನ ಪತ್ತೆ ಹಚ್ಚಲು ತಡರಾತ್ರಿ ಕಾರ್ಯಚರಣೆ ನಡೆಸಿತ್ತು. ಕೊನೆಗೆ ಕಾರ್ಮಿಕನ ಜೊತೆ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದ 188 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲಾ ಆರೋಗ್ಯಧಿಕಾರಿ ಡಾ. ಗುಳೂರು ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.