ಬೆಂಗಳೂರು: ಕೊರೊನಾದಿಂದ ಗುಣಮುಖರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೋಂ ಕ್ವಾರಂಟೈನ್ ವಿನಾಯಿತಿ ಪಡೆದುಕೊಂಡಿದ್ದು, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮುಖ್ಯಮಂತ್ರಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆ, ಈ ಬಾರಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಿಎಂ ನೆರವೇರಿಸಲಿದ್ದಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಇಂದು ಕೊನೆಗೂ ಉತ್ತರ ಸಿಕ್ಕಿದೆ. ಸಿಎಂ ಬಿಎಸ್ವೈ ಧ್ವಜಾರೋಹಣ ನಡೆಸುವುದು ದೃಢವಾಗಿದೆ.
ಇಂದು ಸಂಜೆ 4.30 ಕ್ಕೆ ನಿವಾಸಕ್ಕೆ ಮರಳಿದ ಸಿಎಂ ವಿಶ್ರಾಂತಿಗೆ ಮೊರೆ ಹೋಗಿದ್ದು, ಸಿಎಂ ಜೊತೆ ಅವರ ಪುತ್ರಿ ಪದ್ಮಾವತಿ ಕೂಡ ಕೊರೊನಾ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸಿಎಂ ಜೊತೆಯಲ್ಲಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಾವೇರಿ ನಿವಾಸಕ್ಕೆ ಮರಳಿದರು.
ಹೋಂ ಕ್ವಾರಂಟೈನ್ ವಿನಾಯಿತಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೋಂ ಕ್ವಾರಂಟೈನ್ನಿಂದ ವಿನಾಯಿತಿ ಪಡೆದುಕೊಂಡಿದ್ದಾರೆ. ಕೊರೊನಾ ವಾರಿಯರ್ ಹಾಗೂ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ನಿರ್ವಹಣೆಯ ಆಧಾರದಲ್ಲಿ ಇರುವ ಅವಕಾಶ ಬಳಸಿಕೊಂಡು ಹೋಂ ಕ್ವಾರಂಟೈನ್ ವಿನಾಯಿತಿ ಪಡೆದುಕೊಂಡಿದ್ದಾರೆ. ನೆಗೆಟಿವ್ ವರದಿ ಬಂದ ಮರುದಿನವೇ ಕರ್ತವ್ಯಕ್ಕೆ ಮರಳಲು ಅವಕಾಶವಿದ್ದರೂ, ಎರಡು ದಿನ ವಿಶ್ರಾಂತಿ ಪಡೆದು ನಂತರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಸಿಎಂ ವಿಶ್ರಾಂತಿ ಪಡೆಯಲಿದ್ದು, ನಿವಾಸದಿಂದಲೇ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಎರಡು ಮೂರು ದಿನ ಗೃಹದಲ್ಲೇ ಇರಲಿದ್ದು, ಸ್ವಾತಂತ್ರ್ಯೋತ್ಸವದ ದಿನದಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಈಗಾಗಲೇ ಸಿಎಂ ಕಚೇರಿಯಲ್ಲಿ ಆರಂಭಿಸಲಾಗಿದೆ.
ಸಿ.ಟಿ. ರವಿ ಉದಾಹರಣೆ ಇದೆ:
ಈ ಹಿಂದೆ ಸಿಎಂ ಸಂಪುಟದಲ್ಲಿನ ಸಚಿವ ಸಿ.ಟಿ ರವಿ ಜುಲೈ 11 ಕ್ಕೆ ಕೊರೊನಾ ಸೋಂಕಿಗೆ ಸಿಲುಕಿ, ಹೋಂ ಕ್ವಾರಂಟೈನ್ ಆಗಿದ್ದರು. ಜುಲೈ 23 ರಂದು ನೆಗೆಟಿವ್ ಆಗಿ ಮಾರನೆ ದಿನವೇ ಜುಲೈ 24 ರಂದು ಕರ್ತವ್ಯಕ್ಕೆ ಮರಳಿದ್ದರು. 12 ದಿನದ ಚಿಕಿತ್ಸೆಯ ನಂತರ ಹೋಂ ಕ್ವಾರಂಟೈನ್ ಇಲ್ಲದೇ ಕರ್ತವ್ಯಕ್ಕೆ ಹಾಜರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಂಪರ್ಕಿತರಿಗೆ ಏಳು ದಿನ ಕ್ವಾರಂಟೈನ್:
ಕೊರೊನಾ ವಾರಿಯರ್ಸ್ಗೆ ಹೋಂ ಕ್ವಾರಂಟೈನ್ ಕೂಡ ಏಳು ದಿನಕ್ಕೆ ಸೀಮಿತವಾಗಿದೆ. ಸಾಮಾನ್ಯರಿಗೆ 14 ದಿನ ಹೋಂ ಕ್ವಾರಂಟೈನ್ ಇದೆ. ಸಿಎಂ ಸಂಪರ್ಕಕ್ಕೆ ಬಂದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಇತರರು ಏಳು ದಿನ ಹೋಂ ಕ್ವಾರಂಟೈನ್ ಆಗಿದ್ದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೊಸದಾಗಿ ಯಾವುದೇ ನಿಯಮ ಪಾಲಿಸುವ ಸಲಹೆಯನ್ನು ವೈದ್ಯರು ನೀಡಿಲ್ಲ. ಈ ಹಿಂದಿನ ರೀತಿಯ ಶಿಸ್ತುಬದ್ಧ ಜೀವನ ಶೈಲಿಯನ್ನೇ ಮುಂದುವರೆಸಿದರೆ ಸಾಕು ಎನ್ನುವ ಸಲಹೆ ನೀಡಿದ್ದಾರೆ. ನಿಯಮಿತ ವಾಕಿಂಗ್, ಇಮ್ಯುನಿಟಿ ಹೆಚ್ಚಿಸುವ ಆಹಾರ ಸೇವಿಸುವ ಸಲಹೆಯನ್ನೇ ನೀಡಿದ್ದಾರೆ.