ಬೆಂಗಳೂರು/ ಶಿವಮೊಗ್ಗ: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನ ಐದು ವರ್ಷಗಳ ಕಾಲ ನಿಷೇಧಿಸಿರುವುದು ಸ್ವಾಗತಾರ್ಹ ಕ್ರಮ. ದೇಶದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಿ ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಪಿಎಫ್ಐ ಹಾಗೂ ಅದರ ಇತರೆ ಸಹ ಸಂಸ್ಥೆಗಳ ವಿರುದ್ಧ ಕೇಂದ್ರ ಸೂಕ್ತ ಕ್ರಮ ತೆಗೆದುಕೊಂಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಈ ಕುರಿತು ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, 5 ವರ್ಷ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವುದು ಮಹತ್ವದ ಬೆಳವಣಿಗೆ. ಪಿಎಫ್ಐ ಹಾಗೂ ಅದರ ಇತರೆ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳವರೆಗೆ ಯುಎಪಿಎ ಕಾಯ್ದೆ ಅಡಿ ನಿಷೇಧಿಸಿದೆ. ಸರ್ಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
ಪಿಎಫ್ಐ ಸಂಘಟನೆ ಬ್ಯಾನ್ ಕುರಿತು ಮಾತನಾಡಿದ ಆರಗ ಜ್ಞಾನೇಂದ್ರ, ಅರುಣ್ ಸಿಂಗ್ ಇದನ್ನೂ ಓದಿ:Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ
ದೇಶವನ್ನು ಅಖಂಡವಾಗಿರಿಸಲು ಪಿಎಫ್ಐ ಬ್ಯಾನ್ ಅಗತ್ಯವಿತ್ತು: ದೇಶವನ್ನು ಅಖಂಡವಾಗಿರಿಸಲು ಪಿಎಫ್ ಐ ಸಂಘಟನೆ ಬ್ಯಾನ್ ಮಾಡಿವ ಅವಶ್ಯಕತೆ ಇತ್ತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಕುಮಾರಕೃಪಾ ಗೆಸ್ಟ್ ಹೌಸ್ ಬಳಿ ಮಾತನಾಡಿದ ಅವರು, ಪಿಎಫ್ಐ ಬ್ಯಾನ್ ಮಾಡಿರೋದು ಒಳ್ಳೆಯ ನಿರ್ಧಾರ. ಮುಂದೆ ನಡೆಯುವಂತಹ ದೊಡ್ಡ ಅನಾಹುತಗಳಿಗೆ ಸರ್ಕಾರ ಬ್ರೇಕ್ ಹಾಕಿದೆ. ದೇಶದಲ್ಲಿ ಕೆಲ ಅಹಿತಕರ ಘಟನೆಗಳು ನಡೆಯೋ ಮಾಹಿತಿ ಇತ್ತು. ದೊಡ್ಡ ದೊಡ್ಡ ಗಲಭೆಗಳು ನಡೆಯುವುದರ ಬಗ್ಗೆ ಮಾಹಿತಿ ಬಂದಿತ್ತು. ಇದೊಂದು ಒಳ್ಳೆಯ ನಿರ್ಧಾರ. ಈ ಹಿಂದೆ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಗಿತ್ತು ಎಂದರು.
ಪಿಎಫ್ಐ ಅನೇಕ ಬಾರಿ ದುಷ್ಕೃತ್ಯಗಳಲ್ಲಿ ಭಾಗವಹಿಸಿ, ಅಶಾಂತಿ ಸೃಷ್ಟಿ ಮಾಡಿತ್ತು. ಈ ಹಿಂದೆ ನಡೆದ ಹಲವು ಪ್ರಕರಣಗಳಲ್ಲಿ ಪಿಎಫ್ಐ ಕೈವಾಡವಿರುವುದು ಕಂಡುಬಂದಿದೆ. ದೇಶವನ್ನು ಅಖಂಡವಾಗಿರಿಸಲು ಈ ಸಂಘಟನೆಯ ಬ್ಯಾನ್ ಅವಶ್ಯಕತೆ ಇತ್ತು. ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಮೋದಿ ನಾಯಕತ್ವದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಪಿತೂರಿ ಪಾರ್ಟಿ:ಕಾಂಗ್ರೆಸ್ನಿಂದ ಪೇಸಿಎಂ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಿತೂರಿ ಪಕ್ಷ. ಫೋನ್ ಟ್ಯಾಪಿಂಗ್ ಮಾಡ್ತಾರೆ, ವಿಡಿಯೋ ಟ್ಯಾಪಿಂಗ್ ಮಾಡ್ತಾರೆ. ಕಾಂಗ್ರೆಸ್ನವರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಒಬ್ಬ ಒಳ್ಳೆಯ ಸಿಎಂ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ನಲ್ಲಿ ಯಾರೂ ಲೀಡರ್ ಇಲ್ಲ. ಕಾಂಗ್ರೆಸ್ ನಾಯಕ ಇಲ್ಲದ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುತ್ತದೆ ಎಂದರು.
ಕಾಂಗ್ರೆಸ್ ತೋಡೋ ಯಾತ್ರೆ:ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡುತ್ತ, ರಾಜಸ್ಥಾನದಲ್ಲಿ ಏನಾಗುತ್ತಿದೆ ಅಂತ ನಮಗೆ ಗೊತ್ತು. ಅವರ ಪಕ್ಷದಲ್ಲಿ ಹೊಂದಾಣಿಕೆ ಇಲ್ಲ. ಭಾರತ್ ಜೋಡೋ ಯಾತ್ರೆಯಲ್ಲ, ಅದು ಕಾಂಗ್ರೆಸ್ ತೋಡೋ ಯಾತ್ರೆ. ರಾಜ್ಯದಲ್ಲಿ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಹೊಂದಾಣಿಕೆ ಇಲ್ಲ ಎಂದು ಕಿಡಿಕಾರಿದರು.
ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಮ್ಮ ಮುಖ್ಯಮಂತ್ರಿಗಳಿಗೆ ವಿಶೇಷ ಅಧಿಕಾರ ಇದೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಂಪುಟ ವಿಸ್ತರಣೆ ಸಿಎಂ ಬೊಮ್ಮಾಯಿ ವಿವೇಚನೆಗೆ ಬಿಟ್ಟ ವಿಚಾರ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದರು.