ಬೆಂಗಳೂರು : ರಾಜ್ಯದ ಕೆಲವೆಡೆ ಕೊರೊನಾ ಲಸಿಕೆ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದ್ದು, ಯಾವುದೇ ಕಾರಣಕ್ಕೂ ಅಂತವರನ್ನು ಸುಮ್ಮನೆ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ ಲಸಿಕೆ ಮಾರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಂತವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ.
ರೆಮ್ಡಿಸಿವಿರ್ ಇಂಜೆಕ್ಷನ್ ವಿಷಯದಲ್ಲಿ ಈ ರೀತಿ ಮಾಡಿದ್ದರು, ಆ ನಂತರ ಅದು ಸರಿ ಹೋಗಿದೆ. ಆದರೆ, ಲಸಿಕೆಯ ಅಕ್ರಮ ದಂಧೆಗೆ ಅವಕಾಶ ನೀಡಲ್ಲ. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಲಸಿಕೆ ಕೊರತೆ ನೀಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.
ಖಾಸಗಿಯವರು ಹೆಚ್ಚಿನ ದರದಲ್ಲಿ ಲಸಿಕೆ ನೀಡುವ ಸಂಬಂಧ, ಕೇಂದ್ರ ಒಂದು ನಿಯಮ ರೂಪಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಓದಿ : ಶಿಕ್ಷಕರನ್ನೂ 'ಕೊರೊನಾ ವಾರಿಯರ್ಸ್' ಎಂದು ಪರಿಗಣಿಸಿ, 50 ಲಕ್ಷ ಪರಿಹಾರ ನೀಡಿ: ಹೆಚ್ಡಿಕೆ
ಇಂದಿನಿಂದ ಎರಡನೇ ಹಂತದ ಲಾ್‌ಡೌನ್ ಆರಂಭವಾಗಿರುವ ಹಿನ್ನೆಲೆ ಇನ್ನಷ್ಟು ಬಿಗಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದ್ದು, ಅನಗತ್ಯ ಓಡಾಡುವ ವಾಹನಗಳ ಸೀಜ್ ಮಾಡುವುದನ್ನು ಮುಂದುವರೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡುವವರನ್ನು ಸುಮ್ಮನೆ ಬಿಡಲ್ಲ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗುತ್ತಿದೆ. ಆದರೆ, ಪಟ್ಟಣ ಪ್ರದೇಶದಲ್ಲಿ ಉಲ್ಲಂಘನೆ ಪ್ರಕರಣ ಜಾಸ್ತಿಯಾಗುತ್ತಿವೆ. ಹೀಗಾಗಿ, ಬಿಗಿಯಾದ ಕ್ರಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.