ಬೆಂಗಳೂರು: ಮಾನವೀಯ ಮೌಲ್ಯಗಳಿಗೆ ಒತ್ತು ಕೊಟ್ಟಿರುವ ರಾಜ್ಯ ನಮ್ಮದು. ಮೈಸೂರಿನಲ್ಲಿ ಮಂಗಳವಾರ ನಡೆದಿರುವ ಕೃತ್ಯ ಅತ್ಯಂತ ಅಮಾನವೀಯ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
‘ರಾಮನ ರಾಜ್ಯದಲ್ಲಿ ರಾವಣನ ಕ್ರೌರ್ಯ’
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯ ನಿರ್ಭಯ, ತೆಲಂಗಾಣದ ಪ್ರಿಯಾಂಕಾ ರೆಡ್ಡಿ ಅವರ ಪ್ರಕರಣಕ್ಕಿಂತ ಹೀನಾಯವಾದ ಕೃತ್ಯ ಇದಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಪೋಲೀಸ್ ಕಾರ್ಯವೈಖರಿ ನೋಡಿದರೆ, ಯಾವ ದೇಶದಲ್ಲಿ ರಾಮಮಂದಿರ ಕಟ್ಟಿ, ರಾಮನ ಜಪ ಮಾಡುತ್ತಿರುವ ಬಿಜೆಪಿಯು ರಾವಣನ ಕ್ರೌರ್ಯ ಮೆರೆಯುತ್ತಿದೆ. ಸರ್ಕಾರದ ಘನತೆ ಉಳಿಸಿಕೊಳ್ಳುವ ಸಲುವಾಗಿ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಅತ್ಯಾಚಾರ ಕಾಯ್ದೆಯಡಿ ಯಾಕೆ ಪ್ರಕರಣ ದಾಖಲಿಸಿಲ್ಲ
ಮಂಗಳವಾರ ರಾತ್ರಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ನಂತರ ಸುಮಾರು 11 ಗಂಟೆಗೆ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಅಂಗಾಗಗಳ ಮೇಲೆ ತೀವ್ರವಾಗಿ ದಾಳಿ ನಡೆದಿರುವ ಗಾಯಗಳಾಗಿವೆ. ಬುಧವಾರ ಸಂಜೆ 4 ಗಂಟೆವರೆಗೂ ಪ್ರಕರಣ ದಾಖಲಾಗಿಲ್ಲ. ನಂತರ ಪೊಲೀಸರು 354ಎ ಸೆಕ್ಷನ್ ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅದಕ್ಕೆ ಶಿಕ್ಷೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆಯೇ ಹೊರತು, ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಇದನ್ನು ಸಾಮೂಹಿಕ ಅತ್ಯಾಚಾರ ಎಂದು ಪ್ರಕರಣ ದಾಖಲಿಸಿದರೆ, ದೆಹಲಿ ಹಾಗೂ ತೆಲಂಗಾಣದ ಪ್ರಕರಣಕ್ಕಿಂತ ಗಂಭೀರವಾಗಲಿದೆ ಎಂಬ ಕಾರಣಕ್ಕೆ ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ ಎಂಬ ಮಾಹಿತಿ ಬಂದಿದೆ ಎಂದರು.
ಯಾವ ಮುಖವಿಟ್ಟು ಸಮರ್ಥನೆ
ನಿರ್ಭಯ ಕೇಸ್ ನಡೆದಾಗ ಮೋದಿ ಹಾಗೂ ಬಿಜೆಪಿ ನಾಯಕರು ಪ್ರಧಾನಮಂತ್ರಿಗಳ ರಾಜೀನಾಮೆ ಕೇಳಿದ್ದಿರಿ. ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಹುಡುಗಿಯೊಬ್ಬಳು ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದಾಗ ಅದಕ್ಕೆ ಒಂದು ವರ್ಗ ಕಾರಣ ಎಂದು ರಾಜೀನಾಮೆ ಕೇಳಿದ್ದರು. ಆದರೆ, ಇಂದು ಯಾವ ಮುಖ ಇಟ್ಟುಕೊಂಡು ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಿ ಎಂದು ಗರಂ ಆಗಿದ್ದಾರೆ.
ಮೈಸೂರಿನ ಪೊಲೀಸ್ ಆಯುಕ್ತರು ಇಂತಹ ಘಟನೆ ಇದೇ ಮೊದಲಲ್ಲ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಹಾಗಾದರೆ ಕಳೆದ 2 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರದಲ್ಲಿ ಮುಖ್ಯಮಂತ್ರಿಗಳೇ ಗೃಹ ಸಚಿವರಾಗಿದ್ದರು. ಅಲ್ಲಿ ಇಂತಹ ಘಟನೆ ನಡೆಯುತ್ತಿದ್ದರೂ ಕ್ರಮ ಜರುಗಿಸದಿದ್ದರೆ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದಿದ್ದಾರೆ.
ರಾಜೀನಾಮೆ ನೀಡಲಿ
ಕಳೆದ ಮೂವತ್ತು ದಿನಗಳಲ್ಲಿ ಮೈಸೂರಿನಲ್ಲಿ 3 ಹತ್ಯೆಗಳು ನಡೆದಿವೆ. 1 ಶೂಟೌಟ್ ಆಗಿದೆ, ಸುಮಾರು 16 ಸುಲಿಗೆಗಳು, 3 ದರೋಡೆ, ಇಂದು ಬೆಳಗ್ಗೆ ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ. ಆ ಜಿಲ್ಲ ಮಂತ್ರಿಗಳು, ರಾಜ್ಯದ ಗೃಹ ಸಚಿವರು, ರಾಜ್ಯದ ಸಿಎಂ ಏನು ಮಾಡುತ್ತಿದ್ದಾರೆ?
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ಒಂದೆಡೆಯಾದರೆ, ಇದರ ನೈತಿಕತೆ ಹೊರಬೇಕಾದವರು ಯಾರು? ರಾಮನ ಜಪ ಮಾಡುತ್ತಿರುವವರು ಹೆಣ್ಣು ಮಕ್ಕಳ ರಕ್ಷಣೆ ಮಾಡುತ್ತಿದ್ದಾರಾ? ಈ ದೇಶದ ಪ್ರಧಾನ ಮಂತ್ರಿಗಳು ಅವರ ಮನೆಯ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲು ಆಗುತ್ತಿಲ್ಲ. ಅವರ ಶ್ರೀಮತಿ ಅವರಿಗೆ ಜೀವನಾಂಶ ಹಾಗೂ ರಕ್ಷಣೆ ನೀಡುತ್ತಿಲ್ಲ.