ಬೆಂಗಳೂರು:ವೀಕೆಂಡ್ ಕರ್ಫ್ಯೂವನ್ನು ಬೇರೆ ದಿನಗಳಿಗೆ ವಿಸ್ತರಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಸದ್ಯ ಇರುವ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದನ್ನೇ ಮುಂದುವರೆಸಲಾಗುತ್ತದೆ ಎನ್ನುವುದು ನಿರಾಧಾರ. ಅಂತಹ ಯಾವುದೇ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ. ಅಂತಹ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಸದ್ಯ ಈಗ ವಾರಾಂತ್ಯ ಎರಡು ದಿನ ಸಂಪೂರ್ಣ ಕರ್ಫ್ಯೂ, ಬಾಕಿ ಐದು ದಿನ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ ಎಂದು ತಿಳಿಸಿದರು.
ಇಂದು ಸಂಜೆ ವೇಳೆಗೆ ಕೇಂದ್ರ ಸರ್ಕಾರ ನಮಗೆ ಆಮ್ಲಜನಕ ಪೂರೈಕೆ ಪ್ರಮಾಣವನ್ನು 300 ಮೆಟ್ರಿಕ್ ಟನ್ನಿಂದ 800 ಮೆಟ್ರಿಕ್ ಟನ್ಗೆ ಹೆಚ್ಚಿಸಿ ಆದೇಶ ಹೊರಡಿಸಿರುವಂತೆ ಹೆಚ್ಚುವರಿ ಆಮ್ಲಜನಕ ಬರಲಿದೆ. ಹಾಗಾಗಿ ಬರುವ ದಿನಗಳಲ್ಲಿ ಆಮ್ಲಜನಕದ ಕೊರತೆ ನಮಗೆ ಕಡಿಮೆಯಾಗಲಿದೆ. ಯಾವುದೇ ರೀತಿಯ ಕೊರತೆಯಾಗದಂತೆ ನಿಭಾಯಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಲಿದ್ದಾರೆ. ಈಗ ರಾಜ್ಯದ ಕೋಟಾ ಹೆಚ್ಚಾಗಿದ್ದರಿಂದ ಇನ್ನಷ್ಟು ಅನುಕೂಲವಾಗಿದೆ. ಅದೇ ರೀತಿ ರೆಮ್ಡೆಸಿವಿರ್ ಕೂಡ 50,000 ಇತ್ತು. ಅದನ್ನು ಕೂಡ 1,22,000ಕ್ಕೆ ಹೆಚ್ಚಿಗೆ ಮಾಡಿದ್ದರಿಂದ ಔಷಧ ಕೊರತೆ ಆಗಲ್ಲ. ಎಲ್ಲ ಜಿಲ್ಲೆಗಳಿಗೂ ಅದನ್ನು ಕಳುಹಿಸಿಕೊಡಲಾಗುತ್ತದೆ. ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿ ಸೇರಿದಂತೆ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿರುವ ಕಡೆ ಮೊದಲು ಕಳಿಸಿಕೊಡುತ್ತೇವೆ ಎಂದರು.