ಬೆಂಗಳೂರು:ಅವಹೇಳನಕಾರಿ ಪೋಸ್ಟ್ನಿಂದಾಗಿ ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಹಾಗೂ ಕಾವಲ್ಭೈರ್ ಸಂದ್ರದಲ್ಲಿ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡು ಬರಲು ಪೊಲೀಸರು ಗಾಳಿಯಗಲ್ಲಿ ಗುಂಡು ಹಾರಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಜತೆಗೆ ಕೆಲವರಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಘಟನೆ ಉದ್ವಿಗ್ನತೆ ಪಡೆದುಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ಪಡೆದುಕೊಂಡಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕರೆ ಮಾಡಿ ಜೀವ ಹಾನಿಗೆ ಆತಂಕ ವ್ಯಕ್ತಪಡಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯ ಬಂಧಿಸಿದ ಪೊಲೀಸರು!
ಕೊರೊನಾದಿಂದ ಗುಣಮುಖರಾಗಿ ನಿವಾಸಕ್ಕೆ ಮರಳಿ ವಿಶ್ರಾಂತಿಯಲ್ಲಿರುವ ಸಿಎಂ ಬೆಂಗಳೂರಿನಲ್ಲಿ ನಡೆಯುತ್ತಿರುವ ಗಲಭೆ ಹಿನ್ನಲೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಕ್ಷಣ ಕ್ಷಣದ ಮಾಹಿತಿ ಪಡೆದುಕೊಂಡಿದ್ದಾರೆ. ನಾಲ್ಕು ಗಂಟೆಗಳ ಕಾಲ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಿಎಂ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.
ಗಲಭೆಯಲ್ಲಿ ಓರ್ವ ಮೃತಪಟ್ಟಿದ್ದಕ್ಕೆ ಆತಂಕ ವ್ಯಕ್ತಪಡಿಸಿರುವ ಸಿಎಂ, ಬೊಮ್ಮಾಯಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತಷ್ಟು ಅನಾಹುತ ಸಂಭವಿಸುವ ಮೊದಲೇ ಪರಿಸ್ಥಿತಿ ನಿಯಂತ್ರಿಸಬೇಕು. ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.