ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮದವರ ಜೊತೆ ಮಾತನಾಡಿದರು. ಬೆಂಗಳೂರು: ನಮ್ಮ ಸರ್ಕಾರ ಕನ್ನಡದ ಪರವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲಸವನ್ನು ಹಿಂದೆಯೂ ಮಾಡಿದೆ. ಅದಕ್ಕೆ ಈಗಲೂ ನಾವು ಬದ್ಧ. ಆದರೆ ಪ್ರತಿಭಟನೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಸರ್ಕಾರವನ್ನು ಒತ್ತಾಯಿಸಲಿ. ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ ಎಂದರು.
ಬರಗೂರು ರಾಮಚಂದ್ರಪ್ಪನವರೂ ಸಹ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿದ್ದಾರೆ. ನಾವೂ ಸಹ ಕೆಲವು ಸಮಯದಲ್ಲಿ ಬಿಬಿಎಂಪಿ ಮೂಲಕ ಸೂಚನೆ ನೀಡಿದ್ದೇವೆ. ಕರವೇ ಅವರನ್ನು ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಎಂದಿದ್ದಾರೆ. ಹೇಗೆ ನಡೆಸಿಕೊಳ್ಳಬೇಕು? ಪ್ರತಿಭಟನೆ ಮಾಡುತ್ತಿದ್ದರೆ, ಅರ್ಧಗಂಟೆ ಸಮಯ ಕೊಡುತ್ತಾರೆ. ಅದಾದ ನಂತರ ಏನು ಮಾಡಬೇಕು. ಅದನ್ನು ಪೊಲೀಸರು ಮಾಡಿದ್ದಾರೆ ಎಂದು ತಿಳಿಸಿದರು.
ನಾಮಫಲಕ ವಿಚಾರಕ್ಕೆ ಒತ್ತಾಯಪೂರ್ವಕವಾಗಿ ಅಂಗಡಿ, ಶಾಪಿಂಗ್ ಮಾಲ್‌ಗಳ ಮೇಲೆ ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಸರ್ಕಾರ ಅಥವಾ ಬಿಬಿಎಂಪಿಯವರನ್ನು ಒತ್ತಾಯಿಸಬೇಕಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನೆಯ ಸಂದರ್ಭದಲ್ಲಿ ವ್ಯಾಪಾರಸ್ಥರು ಪೊಲೀಸರ ರಕ್ಷಣೆ ಕೋರಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಪೊಲೀಸರು ಕಣ್ಣಾರೆ ನೋಡಿಕೊಂಡು ಸುಮ್ಮನಿರಬೇಕು ಎಂದು ಬಯಸುವುದು ತಪ್ಪು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಎಚ್ಚರಿಸಿದರು.
ಬೆಂಗಳೂರು ಮಹಾನಗರ ವಿಶ್ವದಲ್ಲೇ ಉತ್ತಮ ನಗರ ಎಂದು ಖ್ಯಾತಿಯಾಗಿದೆ. ಈ ಬಗ್ಗೆ ನಮಗೆ ಹೆಮ್ಮೆ ಇರಬೇಕು. ದಾಂಧಲೆ ನಡೆಸಿದರೆ ಹೇಗೆ? ಹೊರ ರಾಜ್ಯ, ಹೊರದೇಶದಿಂದ ನಗರಕ್ಕೆ ಬರುವ ಜನರಿಗೆ ಯಾವ ಸಂದೇಶ ನೀಡಬೇಕು?. ಇದಕ್ಕಾಗಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಹೇಳಿದರು.
ಕನ್ನಡ ನಾಮಫಲಕ ಕಡ್ಡಾಯ:ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಕೆಗೆ ಮಾಡಲು ಕಾನೂನು ಮಾಡುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ನಾನು ಕರವೇ ಹೋರಾಟವನ್ನು ಬೆಂಬಲಿಸುತ್ತೇನೆ. ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ. ಸರೋಜಿನಿ ಮಹಿಷಿ ವರದಿ ಎರಡೂ ಸದನಗಳಲ್ಲಿ ಅಂಗೀಕಾರವಾಗಿದೆ. ಈ ವರದಿಯನ್ವಯ ನಿಯಮಗಳನ್ನು ಅನುಸರಿಸುತ್ತಿದ್ದೇವೆ. ಜನವರಿ ಮೊದಲ ವಾರದಲ್ಲಿ ಅಂತಿಮ ಸಭೆ ಮಾಡುತ್ತೇವೆ. ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪದಗಳು ಇರಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂಓದಿ:ಫೆ.28ರೊಳಗೆ ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ: ಸಿಎಂ ಸಿದ್ದರಾಮಯ್ಯ