ಗೃಹ ಸಚಿವ ಡಾ. ಜಿ ಪರಮೇಶ್ವರ್ ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಬಳಿಕ ನಿನ್ನೆ ಕೋರಮಂಗಲ ಬಳಿಯ ರೆಸ್ಟೋರೆಂಟ್ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದ ಹಿನ್ನೆಲೆ ಘಟನಾ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಟ್ಟು ಕರಕಲಾಗಿದ್ದ ರೆಸ್ಟೋರೆಂಟ್ ಕಂಡು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ ಪರಮೇಶ್ವರ್, ನಿನ್ನೆ ಯಾವ ರೀತಿ ಸಿಲಿಂಡರ್ ಸ್ಫೋಟವಾಯಿತು ಎಂಬುದು ಗೊತ್ತಿಲ್ಲ. ಒಂದರ ನಂತರ ಒಂದು ಸಿಲಿಂಡರ್ ಬ್ಲಾಸ್ಟ್ ಆಗಿದೆ. ಅಗ್ನಿ ವ್ಯಾಪ್ತಿಸುತ್ತಿದ್ದಂತೆ ಎಲ್ಲರೂ ತಪ್ಪಿಸಿಕೊಂಡಿದ್ದಾರೆ. ರೆಸ್ಟೋರೆಂಟ್ ಸಿಬ್ಬಂದಿ ಒಬ್ಬ ಕಟ್ಟಡದಿಂದ ಜಿಗಿದು ಅಪಾಯದಿಂದ ಪಾರಾಗಿದ್ದರು. ದುರಂತದ ಸ್ಥಳದಲ್ಲಿ ತಾತ್ಕಾಲಿಕವಾಗಿ ಸ್ಟ್ರಕ್ಚರ್ ಮಾಡೋದಕ್ಕೆ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ. ಕೇವಲ ಹೋಟೆಲ್ ನಡೆಸಲು ಮಾತ್ರ ಅವಕಾಶವಿತ್ತು. ಆದರೆ, ಇಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸುತ್ತಿದ್ದರು ಎಂಬುವುದು ಗೊತ್ತಾಗಿದೆ.
ಅತ್ತಿಬೆಲೆ ಪಟಾಕಿ ದುರಂತ, ನಿನ್ನೆಯ ಹೋಟೆಲ್ ದುರಂತ ನಂತರ ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಬೆಂಗಳೂರಿನ ಎಲ್ಲ ರೆಸ್ಟೊರೆಂಟ್ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಯಾರದ್ದೋ ಅಕ್ರಮದಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಲ್ಲಿ ಪಟಾಕಿ ವಿಚಾರಕ್ಕೆ ಕೆಲ ಕಟ್ಟನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ ಪಟಾಕಿ ವಿಚಾರಕ್ಕೆ ಸಭೆ ನಡೆಸಿ ತಿರ್ಮಾನ ಮಾಡುತ್ತೇವೆ. ಕೋರಮಂಗಲ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಿಬಿಎಂಪಿ ಕೊಟ್ಟಿರುವ ಅನುಮತಿ ಬೇರೆ, ಇಲ್ಲಿ ನಡೆಯುತ್ತಿರೋದು ಬೇರೆ. ಅನುಮತಿ ಕೊಟ್ಟ ನಂತರ ಬಿಬಿಎಂಪಿ ಪರಿಶೀಲನೆ ಮಾಡಬೇಕಿತ್ತು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಅವರು ಕಾನೂನು ಮೂಲಕ ಉತ್ತರ ಕೊಡಲಿದ್ದಾರೆ. ನನಗೆ ಈ ವಿಚಾರ ಗೊತ್ತಿಲ್ಲ. ನಾವು ಈ ಹಿಂದೆ ಸಹ ಹೇಳಿದ್ದೇವೆ ಕೇಂದ್ರ, ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದಕ್ಕೆ ಸೂಕ್ತವಾಗಿ ಡಿಕೆಶಿ ಉತ್ತರ ಕೊಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಗ್ನಿಶಾಮಕ ಇಲಾಖೆ ಅಧಿಕಾರಿ, ಸಿಬ್ಬಂದಿಯಿಂದ ತಪಾಸಣೆ: ಕೋರಮಂಗಲದ ರೆಸ್ಟೋರೆಂಟ್ನಲ್ಲಿ ಅಗ್ನಿ ದುರಂತ ಸಂಬಂಧ ಎಚ್ಚೆತ್ತುಕೊಂಡಿರುವ ಅಗ್ನಿಶಾಮಕ ಇಲಾಖೆ ನಗರದ ರೆಸ್ಟೋರೆಂಟ್ ಹಾಗೂ ಪಬ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿರುವ ರೂಫ್ ಟಾಪ್ ಪಬ್ಗಳಿಗೆ ಎಂಟ್ರಿ ಕೊಟ್ಟ ಅಗ್ನಿಶಾಮಕ ಅಧಿಕಾರಿಗಳು, ಕಟ್ಟಡದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ತಪಾಸಣೆ ನಡೆಸಿದ್ದಾರೆ. ಪಬ್, ಹೋಟೆಲ್ಗಳು, ರೆಸ್ಟೋರೆಂಟ್, ಬೃಹತ್ ಮಳಿಗೆಗೆಗಳ ಪರಿಶೀಲನೆ ನಡೆಸಲಾಗಿದೆ.
ಪಬ್ - ರೆಸ್ಟೋರೆಂಟ್ ಮೇಲೆ ಅಗ್ನಿಶಾಮಕ ಇಲಾಖೆ ದಾಳಿ ಅಗ್ನಿಶಾಮಕ ಇಲಾಖೆ ಡಿಜಿ ಕಮಲ್ ಪಂತ್ ಮೌಖಿಕ ಆದೇಶದ ಹಿನ್ನೆಲೆ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ. ಇತ್ತೀಚಿನ ಅಗ್ನಿ ಅವಘಡಗಳಲ್ಲಿ ಸೂಕ್ತ ಮುಂಜಾಗ್ರತ ಕ್ರಮ ಅನುಸರಿಸದ ಹಿನ್ನೆಲೆ ತ್ಚರಿತಗತಿಯಲ್ಲಿ ಬೆಂಕಿ ನಂದಿಸುವ ಸಲಕರಣೆ ವ್ಯವಸ್ಥಿತಗೊಳಿಸದಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಕೆಲ ಮುಂಜಾಗ್ರತಾ ಕ್ರಮ ವಹಿಸದೆ, ನಿಯಮಗಳನ್ನು ಗಾಳಿಗೆ ತೂರಿ ಪಬ್, ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ನಗರದ ಎಲ್ಲಾ ಬಹುಮಹಡಿ ಕಟ್ಟಡಗಳು, ಅಪಾರ್ಟ್ಮೆಂಟ್ಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ನಿಯಮ ಪಾಲಿಸದವರ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ಡಿಜಿಪಿ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಹೀಗಾಗಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ರೂಫ್ ಟಾಫ್ ರೆಸ್ಟೋರೆಂಟ್ ಮತ್ತು ಪಬ್ನಲ್ಲಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಡಿಕೆಶಿ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ, ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು