ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಮಾಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ಆದರೆ, ಪ್ರತಿಭಟನೆ ಮಾಡಬಹುದು. ಪ್ರತಿಭಟನೆ ಅವರ ಹಕ್ಕು. ಸಂಘಟನೆಗಳಿಗೆ ಕರ್ನಾಟಕ ಬಂದ್ ಬೇಡ ಎಂದು ಮನವಿ ಮಾಡಿದ್ದೇವೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್ಗೆ ಬೆಂಬಲ ಕೊಡುತ್ತಿದ್ದಾವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಬಾರದು. ಬಂದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸೂಕ್ತವಾದ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮಂಗಳವಾರ ಒಂದು ದಿನದ ಬೆಂಗಳೂರು ಬಂದ್ನಿಂದ ಅಂದಾಜು 1,000 ರಿಂದ 2000 ಕೋಟಿ ರೂ. ನಷ್ಟವಾಗಿದೆ. ಇವತ್ತು ರಜೆ ಇದೆ. ನಾಳೆಯು ಬಂದ್ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಲಿದೆ. ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡುತ್ತಿದ್ದಾರಾ ಅಥವಾ ಬೇರೆಯವರು ಅವರ ಮೇಲೆ ಒತ್ತಡ ಹೇರುತ್ತಿದ್ದಾರಾ ಗೊತ್ತಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ :ನಾಡು, ನುಡಿಗೆ ಧಕ್ಕೆಯಾದಾಗ ಹೇಗೆ ಹೋರಾಟ ಮಾಡಬೇಕು ಎನ್ನುವುದನ್ನು ತಮಿಳು ಭಾಷಿಕರನ್ನು ನೋಡಿ ಕಲಿಯಬೇಕು : ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿವೆ. ಇತ್ತ ಬಂದ್ಗೆ ಬಿಜೆಪಿ ಹಾಗೂ ಜೆಡಿಎಸ್ ಕೂಡ ಬೆಂಬಲ ನೀಡಿದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮಂಗಳವಾರವಷ್ಟೇ ಬೆಂಗಳೂರು ಬಂದ್ ನಡೆದಿತ್ತು. ಇದೀಗ ವಾರದಲ್ಲೇ ಎರಡನೇ ಬಂದ್ಗೆ ಕರೆ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ :ಧಾರವಾಡದಲ್ಲಿ ಕನ್ನಡಪರ, ರೈತ ಸಂಘಟನೆಗಳಿಂದಲೂ ಕಾವೇರಿ ಹೋರಾಟ : ಕರ್ನಾಟಕ ಬಂದ್ಗೆ ಬೆಂಬಲ
ಮೈತ್ರಿಯಿಂದ ಕಾಂಗ್ರೆಸ್ನತ್ತ ಹಲವರ ಚಿತ್ತ : ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯಾದ ನಂತರ ಸಾಕಷ್ಟು ಜನ ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ಈಗ ತತ್ವ ಸಿದ್ಧಾಂತ ಎಂಬುದು ಇಲ್ಲ. ಎಲ್ಲಾ ಅನುಕೂಲ ಸಿಂಧು ರಾಜಕಾರಣ. ಬೇರೆ ಬೇರೆ ಕಡೆಗಳಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಕೆಲವರು ಆಸಕ್ತಿ ತೋರಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ :ಹೆಚ್ಡಿಕೆ - ಬಿಎಸ್ ವೈ ಮೈತ್ರಿ ಪ್ರತಿಭಟನೆಗೆ ಶುಭವಾಗಲಿ .. ಅದೇ ರೀತಿ ಒಗ್ಗಟ್ಟಾಗಿ ಕೇಂದ್ರದ ಮುಂದೆ ಕೇಳಲಿ : ಡಿಸಿಎಂ ಡಿ ಕೆ ಶಿವಕುಮಾರ್