ಬೆಂಗಳೂರು: ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತಿರುವುದು ಸಂವಿಧಾನ ಬದ್ಧಕಾರ್ಯವೇ ಹೊರತು ಜನ ವಿರೋಧಿ ಅಲ್ಲ. ಸಂವಿಧಾನ ಎಲ್ಲಾ ಧರ್ಮಗ್ರಂಥಗಳಂತೆ ದೇಶದ ಆಡಳಿತ ವ್ಯವಸ್ಥೆಯ ಗ್ರಂಥ ನಾವು ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಉತ್ತರಿಸಿದರು.
ನಗರದ ಕರ್ನಾಟಕ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಮತಾಂತರ ನಿಷೇಧ ಮಸೂದೆಯನ್ನು ತರುವ ಮೊದಲೇ ಯೋಚಿಸಬೇಕಿತ್ತು. ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನವೇ ಬೈಬಲ್, ಭಗವದ್ಗೀತೆ ಮತ್ತು ಕುರಾನ್ ಗ್ರಂಥವಿದ್ದಂತೆ. ಸಂವಿಧಾನದ ಕಲಂ 25ರಲ್ಲಿ ಉಲ್ಲೇಖಿಸಿದಂತೆ, ಪ್ರತಿಯೊಬ್ಬ ಭಾರತೀಯನಿಗೂ ತನ್ನದೇ ಆದ ಮತವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಾಗೂ ಇದರ ಕುರಿತು ಬೇರೆಯವರಿಗೆ ತಿಳಿಸಿಕೊಡುವುಕ್ಕೆ ಅವಕಾಶವಿದೆ ಎಂದು ಹೇಳಿದರು.
ಸಂವಿಧಾನಕ್ಕೆ ವಿರುದ್ಧವಾಗಿ ಭಾರತೀಯ ಜನತಾ ಪಾರ್ಟಿ ಮಾಡಿರುವ ಕಾನೂನಾಗಿದೆ. ಸದನದಲ್ಲಿ ಅವರು ಮಸೂದೆಯನ್ನು ತರುವ ಸಂದರ್ಭದಲ್ಲಿ ಇದು ಸಂವಿಧಾನಕ್ಕೆ ವಿರುದ್ಧವೆಂದು ಹೇಳಿದ್ದೇವೆ. ಇದೀಗ ನಮ್ಮ ಸರ್ಕಾರ ಬಂದಿದೆ. ನಮ್ಮ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆಯಿದೆ. ಹಾಗಾಗಿ ನಾವು ಮತಾಂತರ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಅಷ್ಟೆ. ನಾವು ಯಾವುದೇ ಜನ ವಿರೋಧಿ ಕಾರ್ಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಅಕ್ಕಿ ಪೂರೈಕೆಯ ಹಗ್ಗಜಗ್ಗಾಟದ ವಿಚಾರವಾಗಿ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರನ್ನು ಹೇಳಿ ಕೇಳಿ ಅಧಿಕಾರ ಮಾಡಲು ಆಗುವುದಿಲ್ಲ. ನಾವು ಈಗಾಗಲೇ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ. ಅದರಂತೆ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ. ಜನಪರ ಆಡಳಿತ ಕೊಡುವ ವಿಚಾರವಾಗಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಇವರನ್ನು ಕೇಳಿಕೊಂಡು ನಾವು ಆಡಳಿತ ನಡೆಸಬೇಕೆ? ಎಂದು ವಾಗ್ದಾಳಿ ನಡೆಸಿದರು.