ಗೃಹ ಸಚಿವ ಪರಮೇಶ್ವರ್ ಹೇಳಿಕೆ ಬೆಂಗಳೂರು:ಸಂಸದ ಅನಂತ ಕುಮಾರ್ ಹೆಗಡೆ ಪ್ರಚೋದನಾ ಹೇಳಿಕೆಯಿಂದ ಏನಾದರು ಘಟನೆ ನಡೆದರೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಅವರು ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡುತ್ತಾ, ರಾಜ್ಯದ ಸಂಸದರು ಹಾಗೂ ಕೇಂದ್ರದ ಮಂತ್ರಿಯಾಗಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು. ಕಳೆದ ಮೂರು ವರ್ಷಗಳಿಂದ ಅವರು ಎಲ್ಲೂ ಮಾತನಾಡೇ ಇರಲಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಸಾರ್ವಜನಿಕವಾಗಿ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅದರ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ ಒಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ನಿಂದಿಸುವುದು, ಪ್ರಚೋದನಕಾರಿಯಾಗಿ ಮಾತನಾಡುವುದನ್ನು ನಾವು ಗಮನಿಸುತ್ತಿದ್ದೇವೆ. ಪೊಲೀಸ್ ಇಲಾಖೆಯಲ್ಲೂ ಅದನ್ನೆಲ್ಲಾ ಗಮನಿಸುತ್ತಾರೆ. ಕಾನೂನಿನಡಿ ಅದನ್ನು ನೋಡುತ್ತೇವೆ ಎಂದರು.
ನಮಗೆ ನಮ್ಮದೇ ಆದ ಭಾವನೆ ಇರುತ್ತದೆ. ಸಂಸ್ಕೃತಿ ಇರುತ್ತದೆ. ಆ ರೀತಿ ಮಾತನಾಡಿದರೆ ಜನರು 'ಅದು ಅವರ ಸಂಸ್ಕೃತಿ ತೋರಿಸುತ್ತೆ' ಅಂತ ಹೇಳುತ್ತಾರೆ. ಸಾಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮ ಕೆಲಸ. ಶಾಂತಿ ಕದಡುವ ಕೆಲಸ ಸರಿ ಕಾಣಿಸುವುದಿಲ್ಲ. ಸಿಎಂ ಬಗ್ಗೆ ಬಹಳ ಸುಲಭವಾಗಿ ಮಾತನಾಡಬಹುದು. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಅವರಿಗೆ ಶ್ರೀರಾಮನೇ ಬುದ್ಧಿ ನೀಡಬೇಕು. ಅವರ ಪ್ರಚೋದನಕಾರಿ ಹೇಳಿಕೆಯಿಂದ ಏನಾದರು ಘಟನೆಗಳು ನಡೆದರೆ ಅದಕ್ಕೆ ಅವರೇ ಜವಾಬ್ದಾರಿಯಾಗುತ್ತಾರೆ. ಬೇರೆ ಯಾರು ಜವಾಬ್ದಾರಿ ಆಗಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ಕುಲವಂ ನಾಲಗೆ ನುಡಿಯಿತು:ಇದೇ ವೇಳೆ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉ.ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಾರ್ವಜನಿಕವಾಗಿ ಹೀಗಳೆದಿದ್ದಾರೆ. 'ಕುಲವಂ ನಾಲಗೆ ನುಡಿಯಿತು' ಎಂಬಂತೆ ಉ.ಕನ್ನಡ ಸಂಸದರ ಸಂಸ್ಕಾರ ಅವರ ಮಾತುಗಳಲ್ಲೇ ತಿಳಿಯುತ್ತದೆ. ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ಸಿದ್ದರಾಮಯ್ಯರ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮಾನರಲ್ಲ ಎಂದು ಕಿಡಿ ಕಾರಿದ್ದಾರೆ.
ಶೋಷಿತ ಸಮುದಾಯದ ಧ್ವನಿಯಾಗಿರುವ ಸಿದ್ದರಾಮಯ್ಯರನ್ನು ಮತಾಂಧತೆಯ ವಿಷ ತುಂಬಿಕೊಂಡಿರುವ ಹೆಗಡೆ ಏಕವಚನದಲ್ಲಿ ನಿಂದಿಸಿರುವುದು ಅವರ ಕೊಳಕು ಮನಸ್ಥಿತಿಯ ಅನಾವರಣ ಮಾಡಿದೆ. ಅನಂತ್ ಕುಮಾರ್ ಹೆಗಡೆ ಹಿಂದೂ ಸಮಾಜಕ್ಕೆ ಕಳಂಕವಿದ್ದಂತೆ. ವಯಸ್ಸಿನಲ್ಲಿ ಹಿರಿಯರಾದವರಿಗೆ ಮರ್ಯಾದೆ ಕೊಡುವುದು ನಮ್ಮ ಹಿಂದೂ ಧರ್ಮ ಕಲಿಸಿರುವ ಸಂಸ್ಕಾರ ಎಂದಿದ್ದಾರೆ.
ಅನಂತ್ ಕುಮಾರ್ ಹೆಗಡೆಯವರು ಯಾವ ಧರ್ಮದಿಂದ ಈ ರೀತಿ ಕೊಳಕು ಭಾಷೆ ಮಾತನಾಡುವ ಸಂಸ್ಕಾರ ಕಲಿತಿದ್ದಾರೆ.? ಬಾಯಿ ಬಿಟ್ಟರೆ ಹೊಡಿ, ಬಡಿ, ಕೊಚ್ಚು, ಕೊಲ್ಲು, ದ್ವೇಷ, ಸೇಡು ಎನ್ನುವ ಅನಂತ್ ಕುಮಾರ್ ಹೆಗಡೆಯಂತಹವರು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾರೆ. ಅವರು ಸಾರ್ವಜನಿಕವಾಗಿ ಹೇಗೆ ಮಾತಾಡಬೇಕು ಹಾಗೂ ಹೇಗೆ ವರ್ತಿಸಬೇಕು ಎಂಬ ಕನಿಷ್ಟ ಜ್ಞಾನವನ್ನು ದಯವಿಟ್ಟು ಬೆಳೆಸಿಕೊಳ್ಳಿ. ನಿಮ್ಮಂತೆ ಹಿಂದುತ್ವದ ಅಮಲು ತುಂಬಿಕೊಂಡಿರುವ ಕೆಲವರಿಗೆ ಮಾತ್ರ ನಿಮ್ಮ ಅಸಹ್ಯದ ಮಾತುಗಳು ರುಚಿಸಬಹುದೇನೋ? ಎಂದು ಪ್ರಶ್ನಿಸಿದ್ದಾರೆ.
ಆದರೆ ಪ್ರಜ್ಞಾವಂತ ಹಿಂದೂಗಳು ಯಾವತ್ತಿಗೂ ನಿಮ್ಮ ಮಾತು ಒಪ್ಪಲಾರರು. ಬಸವಣ್ಣ, ಕುವೆಂಪು, ನಾರಾಯಣ ಗುರು ಹಾಗೂ ಕನಕದಾಸರಂತಹ ಅನೇಕ ಮಹಾನ್ ವ್ಯಕ್ತಿಗಳು ಬದುಕಿ ಬಾಳಿದ ನೆಲವಿದು. ನಿಮ್ಮ ಕೊಳಕು ಮಾತುಗಳಿಂದ ಈ ನೆಲದ ಪಾವಿತ್ರ್ಯವನ್ನು ಹಾಳು ಮಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು