ಬೆಂಗಳೂರು:ಪ್ರಗತಿಪರ ಚಿಂತಕರಿಗೆ ಬೆದರಿಕೆ ಪತ್ರ ಸಂಬಂಧ ಕಮಿಷನರ್, ಡಿಜಿಪಿಗೆ ರಕ್ಷಣೆ ನೀಡುವಂತೆ ಸೂಚಿಸಿದ್ದೇನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಪ್ರಗತಿಪರರಿಗೆ ಬೆದರಿಕೆ ಪತ್ರ ವಿಚಾರವಾಗಿ ಇಂದು ನಗರದಲ್ಲಿ ಮಾತನಾಡಿದ ಅವರು, ಕೆಲ ಸಾಹಿತಿಗಳು ಭೇಟಿಗಾಗಿ ಸಮಯ ಕೇಳಿದ್ದಾರೆ. ಸಮಯ ನೀಡಿ ಭೇಟಿಯಾಗುತ್ತೇನೆ. ಅವರು ಬರೆದ ಪತ್ರವನ್ನು ಡಿಜಿಪಿಗೆ ಕಳುಹಿಸುತ್ತೇನೆ. ನಾವು ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಇನ್ನೂ ಮರೆತಿಲ್ಲ. ಹೀಗಾಗಿ ಬೆದರಿಕೆ ಬಂದಿದೆ ಅಂದ್ರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಾಹಿತಿಗಳನ್ನು ಭೇಟಿಯಾದ ಮೇಲೆ ಗೊತ್ತಾಗುತ್ತೆ, ಯಾರು ಯಾಕೆ ಬರೆದರು ಅಂತ ಎಂದು ತಿಳಿಸಿದರು.
ಸಾಹಿತಿಗಳ ಪತ್ರದಲ್ಲೇನಿದೆ?"ಆಗಸ್ಟ್ 14ರಂದು ಪ್ರೊ.ಕೆ.ಮರುಳಸಿದ್ದಪ್ಪ ಬರೆದಿರುವ ಪತ್ರದಲ್ಲಿ "ಕೋಮುವಾದ, ಜಾತಿವಾದ, ಮೌಢ್ಯ ವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಬೆದರಿಕೆ ಪತ್ರಗಳ ಸರಣಿಯಿಂದ ಮಾನಸಿಕ ಹಿಂಸೆಯಾಗುತ್ತಿದೆ. ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದು ಎಂಬ ಆತಂಕದಿಂದಲೇ ತಮ್ಮ ಸೃಜನಶೀಲ, ಸಮಾಜಮುಖಿ ಕೆಲಸಗಳಲ್ಲಿ ತೊಡಗುವಂತಾಗಿದೆ. ಪ್ರೊ.ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಪ್ರಕರಣಗಳ ಹಿನ್ನೆಲೆಯ ವಾಸ್ತವ ಸಂಗತಿಯು ಇದರ ಗಂಭೀರತೆ ಹೆಚ್ಚಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಗತಿಪರ ಆಶಯಗಳ ಬಗೆಗೆ ಅಸಹನೆ ಆಕ್ರೋಶವಿರುವ ಹಿಂಸಾರಭಸಮತಿಗಳು ಈ ಬೆದರಿಕೆ ಪತ್ರಗಳ ಹಿಂದಿನ ರೂವಾರಿಗಳಾಗಿದ್ದು, ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶ ನೀಡಬೇಕು.
ಅಲ್ಲದೇ ಈ ಬಗೆಗೆ ವಿವರಗಳನ್ನು ನೀಡಿ ತಮಗೆ ಮನವರಿಕೆ ಮಾಡಿಕೊಡಲು ನಾವು ಕೆಲವರು ತಮ್ಮನ್ನು ಭೇಟಿಯಾಗಲು ಬಯಸಿದ್ದೇವೆ. ಪ್ರೊ. ಕೆ.ಮರುಳಸಿದ್ದಪ್ಪ, ಡಾ. ಜಿ. ರಾಮಕೃಷ್ಣ, ಡಾ. ವಿಜಯನ್ನು ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಮುಂತಾಗಿ ಹದಿನೈದಕ್ಕೂ ಹೆಚ್ಚು ಸಾಹಿತಿಗಳು ತಮ್ಮನ್ನು ಭೇಟಿ ಮಾಡಲು ಉದ್ದೇಶಿಸಿದೆ" ಎಂದು ಭೇಟಿಗೆ ಸೂಕ್ತ ದಿನ, ಸಮಯವನ್ನು ನಿಗದಿ ಪಡಿಸಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ.
ಇನ್ನು ನಟ ಉಪೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿರುವ ಪರಮೇಶ್ವರ್, ಉಪೇಂದ್ರ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ದುರುದ್ದೇಶದಿಂದ ಹೇಳಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಕಾನೂನು ಬೇರೆ ದೃಷ್ಟಿಯಲ್ಲೇ ನೋಡುತ್ತೆ. ಈ ನಿಟ್ಟಿನಲ್ಲಿ ಪೊಲೀಸರು ಕ್ರಮವಹಿಸುತ್ತಾರೆ. ಕಾನೂನು ಇದೆ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಉಪೇಂದ್ರ, ಮಲ್ಲಿಕಾರ್ಜುನ್ ಅಂತ ಬೇಧ ಭಾವ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನಾನು ಸಿಎಂ ಭೇಟಿಯಾದ ಉದ್ದೇಶವೇ ಬೇರೆ. ಈ ವಿಚಾರಕ್ಕೆ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.