ಬೆಂಗಳೂರು:ಡ್ರಗ್ಸ್ ಮಾರಾಟಕ್ಕೆ ಒಂದು ಭೌಗೋಳಿಕ ಚೌಕಟ್ಟಿಲ್ಲ ಎಂದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಗೋವಾದಿಂದ ಬರುವ ಗಾಂಜಾ ಮತ್ತಿತರ ಡ್ರಗ್ಸ್ಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ವಿದೇಶಗಳಿಂದ ಹಾಗೂ ಇತರೆ ಮೂಲಗಳಿಂದ ಬರುತ್ತಿದ್ದಾರೆ. ಇದರಲ್ಲಿ ವಿದೇಶಿಗರು ಭಾಗಿಯಾಗಿದ್ದಾರೆ. ಅವಧಿ ಮೀರಿ ಯಾರು ಇಲ್ಲಿ ವೀಸಾ ಇಲ್ಲದೆ ವಾಸವಾಗಿದ್ದಾರೆ. ಅಂತವರನ್ನು ಹೊರಹಾಕಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ, ಡ್ರಗ್ಸ್ ಮತ್ತಿತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಇಂದು ಚರ್ಚಿಸಲಾಗಿದೆ. ಡ್ರಗ್ಸ್ ಬಗ್ಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಅತಿ ಹೆಚ್ಚು ಡ್ರಗ್ಸ್ ಕೇಸುಗಳನ್ನು ಪತ್ತೆ ಹಚ್ಚಿದ್ದೇವೆ. 1437 ಡ್ರಗ್ಸ್ ಪ್ರಕರಣಗಳು ದಾಖಲಾಗಿದೆ. ಈ ಸಂಬಂಧ 1792 ಆರೋಪಿಗಳನ್ನು ಬಂಧಿಸಿದ್ದೇವೆ. ಇದು ಬೆಂಗಳೂರಿನಲ್ಲಿ ಸಿಕ್ಕಿರುವ ಅಂಕಿ ಅಂಶಗಳು ಎಂದರು.
ಡ್ರಗ್ಸ್ನಲ್ಲಿ ಎರಡು ರೀತಿ ಇದೆ. ಒಂದು ಹೈಯರ್ ಎಂಡ್ ಗಾಂಜಾ, ಸಿಂಥೆಟಿಕ್ ಗಾಂಜಾ. ಗಾಂಜಾ ಬೆಳೆಯುವ ಪ್ರದೇಶಗಳನ್ನು ಗುರುತು ಮಾಡಿದ್ದೇವೆ. ಎಲ್ಲೆಲ್ಲಿ ಗಾಂಜಾ ಬೆಳೆಯುತ್ತಾರೆ ಅದನ್ನು ನಾಶ ಮಾಡಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಗಾಂಜಾವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅದನ್ನು ನಾಶ ಮಾಡುವ ಉದ್ದೇಶ ನಮ್ಮದು. ಆಂಧ್ರ, ಗೋವಾದಿಂದ ಗಾಂಜಾ ಬರುತ್ತಿದೆ ಎಂಬ ಮಾಹಿತಿ ಇದೆ. ಅದು ಬಾರದಂತೆ ತಡೆಯುವುದು ನಮ್ಮ ಗುರಿ. ಅದಕ್ಕೆ ಕೆಲ ಸೂಚನೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗದ ಐಜಿಪಿ ಹಾಗೂ ಸಿಐಡಿ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಡ್ರಗ್ಸ್ ನಿಯಂತ್ರಣ ಮಾಡಲಿದ್ದಾರೆ ಎಂದರು.