ಬೆಂಗಳೂರು: ನೂತನ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಸಭೆ ನಡೆಸಿದರು. ಅಪರಾಧ ಚಟುವಟಿಕೆ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೂತನ ಗೃಹ ಸಚಿವರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯದ ಹಾಗೂ ಬೆಂಗಳೂರಿನ ಅಪರಾಧ ಪ್ರಮಾಣ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದರು. ಗಣೇಶ ಚತುರ್ಥಿ ಹತ್ತಿರವಾಗುತ್ತಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸುವಂತೆ ಸೂಚಿಸಿದರು.
ಬೆಂಗಳೂರು ಅಪರಾಧ ಮುಕ್ತ ತಾಣವಾಗಲು ಶ್ರಮ ವಹಿಸಲು ಮತ್ತು ಪುಡಿ ರೌಡಿಗಳ ಉಪಟಳವನ್ನು ನಿಯಂತ್ರಿಸುವಂತೆ ನಿರ್ದೇಶಿಸಿದರು. ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ನಿಮಗೆ ಸಹಕಾರ ಕೊಡುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗಳನ್ನು ನನ್ನ ಬಳಿ ಮುಕ್ತವಾಗಿ ಚರ್ಚಿಸಿ, ಬಗೆಹರಿಸೋಣ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಬೊಮ್ಮಾಯಿ ಅಭಯ ನೀಡಿದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ. ತನಿಖಾ ಹಂತದ ಕೇಸ್ಗಳನ್ನ ಶೀಘ್ರವಾಗಿ ಮುಗಿಸಬೇಕು. ಪೊಲೀಸರಿಗೆ ಅಗತ್ಯವಾದ ಸಹಕಾರ ನೀಡುತ್ತೇನೆ. ಜನರು ಶಾಂತಿಯಿಂದ ಜೀವನ ನಡೆಸುವಂತೆ ರಕ್ಷಣೆ ಒದಗಿಸುವ ಕೆಲಸ ನಿಮ್ಮದು ಎಂದು ತಿಳಿಸಿದರು.
ಡಿಜಿಪಿ ನೀಲಮಣಿ ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಕೇಂದ್ರ ಗುಪ್ತಚರ ಇಲಾಖೆ ಹೈ ಅಲರ್ಟ್ ಘೋಷಿಸಿದ ಹಿನ್ನೆಲೆ ಎಲ್ಲರೂ ಹೆಚ್ಚು ಅಲರ್ಟ್ ಇರುವಂತೆ ಸೂಚನೆ ನೀಡಿದರು. ಹೈಟೆಕ್ ಅಪರಾಧ , ಡ್ರಗ್ಸ್ ಮಾರಾಟ ಪ್ರಕರಣಗಳ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದರು. ಅಗ್ನಿ ಅನಾಹುತ ತಡೆಗೆ ಅಗ್ನಿಶಾಮಕ ಇಲಾಖೆ ಮತ್ತಷ್ಟು ಸಕ್ರಿಯ ಆಗಬೇಕು. ಅಗ್ನಿಶಾಮಕ ನಿಯಮಗಳ ಪಾಲನೆ ಮಾಡದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.