ಕರ್ನಾಟಕ

karnataka

ETV Bharat / state

ಟೀಕೆ, ಟಿಪ್ಪಣಿಗಳಿಗೆ ಅಳುಕದೆ ನ್ಯಾಯಸಮ್ಮತವಾಗಿ ಕೆಲಸ ಮಾಡಿ: ಪೊಲೀಸರಿಗೆ ಬೊಮ್ಮಾಯಿ ಕರೆ - ಯಡಿಯೂರಪ್ಪ

ರಾಜ್ಯದ ಪ್ರತಿ ಜಿಲ್ಲೆಗಳಿಗೆ ಒಂದರಂತೆ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಜರುಗಿಸಲಾಗುತ್ತಿದೆ. ಸೈಬರ್ ಅಪರಾಧಗಳನ್ನು ಪತ್ತೆ ಮಾಡಿದ್ದೇವೆ. ಬ್ಯಾಂಕುಗಳಲ್ಲಿ ನಡೆಯುವ ಮೋಸಗಳನ್ನು ಆರ್​ಬಿಐ ನೆರವಿನೊಂದಿಗೆ ಪತ್ತೆ ಮಾಡಿದ್ದೇವೆ. ಇದಕ್ಕೆ ಕಾರಣ ನಮ್ಮ ಪೊಲೀಸರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.

police flag day
ಪೊಲೀಸ್ ಧ್ವಜ ದಿನಾಚರಣೆ

By

Published : Apr 2, 2021, 9:11 PM IST

ಬೆಂಗಳೂರು: ಅತ್ಯಂತ ಸಂಕೀರ್ಣ ಅಪರಾಧ ಪ್ರಕರಣಗಳ ತನಿಖೆ ಮಾಡುವ ಸಂದರ್ಭದಲ್ಲಿ ಹಲವರು ಅಡ್ಡಿಪಡಿಸುವ ಕೆಲಸ ಮಾಡುತ್ತಾರೆ. ಈ ಎಲ್ಲ ಅಡ್ಡಿ ಆತಂಕ, ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು ವಿಷಕಂಠನಂತೆ ನ್ಯಾಯ ಸಮ್ಮತವಾಗಿ ತನಿಖೆ ಮಾಡಿ ಉತ್ತರ ನೀಡುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.

ಬೆಂಗಳೂರಿನಲ್ಲಿ ಗೃಹ ಇಲಾಖೆ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪದಕ ವಿತರಿಸಿದ ನಂತರ ಅವರು ಮಾತನಾಡಿದರು.

ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಗೃಹ ಸಚಿವ ಬೊಮ್ಮಾಯಿ ಭಾಷಣ

ಅತ್ಯಂತ ಸಂಕೀರ್ಣ ಪ್ರಕರಣಗಳನ್ನು ರಾಜ್ಯದ ಪೊಲೀಸರು ಬಗೆಹರಿಸಿದ್ದಾರೆ. ಆ ಕಾರಣಕ್ಕಾಗಿಯೇ ದೇಶದಲ್ಲಿ ಕರ್ನಾಟಕ ಪೊಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಅದರೆ ಇದೆಲ್ಲದರ ಮಧ್ಯೆ ತನಿಖೆಯ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಕೆಲವರು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ. ಇದಾವುದಕ್ಕೂ ವಿಚಲಿತರಾಗದೇ ವಿಷಕಂಠನಂತೆ ಕರ್ತವ್ಯ ನಿರ್ವಹಣೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.

ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡಲಾಗುವುದು. ಇದಕ್ಕೆ ಕೆಎಸ್​ಆರ್​ಪಿ ಸಜ್ಜಾಗಿದೆ ಎಂದರು.

ಡ್ರಗ್ಸ್​​​ ವಿರುದ್ಧ ಸಮರ

ರಾಜ್ಯದಲ್ಲಿ ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಡ್ರಗ್ಸ್​​ ಪತ್ತೆ ಹಚ್ಚಿ ಸೀಜ್ ಮಾಡಿದ್ದೇವೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಹೋಗಿ ಮಾದಕ ವಸ್ತುಗಳ ಮಾರಾಟ ಜಾಲಗಳನ್ನು ಪತ್ತೆ ಮಾಡಿ ಸೆದೆ ಬಡಿದಿದ್ದೇವೆ. ಡ್ರಗ್ಸ್​ ವಿರುದ್ಧ ಸಮರ ಸಾರಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ರಾಜ್ಯದ ಪ್ರತಿ ಜಿಲ್ಲೆಗಳಿಗೆ ಒಂದರಂತೆ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಜರುಗಿಸಲಾಗುತ್ತಿದೆ. ಸೈಬರ್ ಅಪರಾಧಗಳನ್ನು ಪತ್ತೆ ಮಾಡಿದ್ದೇವೆ. ಬ್ಯಾಂಕುಗಳಲ್ಲಿ ನಡೆಯುವ ಮೋಸಗಳನ್ನು ಆರ್​ಬಿಐ ನೆರವಿನೊಂದಿಗೆ ಪತ್ತೆ ಮಾಡಿದ್ದೇವೆ. ಇದಕ್ಕೆ ಕಾರಣ ನಮ್ಮ ಪೊಲೀಸರು ಎಂದು ಗೃಹ ಸಚಿವರುಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗೃಹ ಇಲಾಖೆಯ ಹಲವಾರು ಕಾರ್ಯಕ್ರಮಗಳಿಗೆ ಸಕಲ ರೀತಿಯ ನೆರವು ನೀಡಿದ್ದಾರೆ. ಪೊಲೀಸರಿಗೆ ಮನೆ ನಿರ್ಮಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಆರೋಗ್ಯ ಭಾಗ್ಯ ಯೋಜನೆ ವಿಸ್ತರಣೆಗೆ 20 ಕೋಟಿ ರೂ.ಅನುದಾನ ನೀಡಿದ್ದಾರೆ. ಆ ಪೈಕಿ 7 ಕೋಟಿ ಹಣ ಮಂಜೂರು ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಹುದ್ದೆ ಭರ್ತಿಗೆ ಸಮ್ಮತಿಸಿದ್ದಾರೆ. ಬಂದೊಬಸ್ತ್ ಭತ್ಯೆಯನ್ನು 100 ರಿಂದ 200 ರೂಪಾಯಿಗೆ ಹೆಚ್ಚಿಸಿದ್ದಾರೆ ಎಂದರು.

ಪೊಲೀಸ್ ಇಲಾಖೆಯ ಆಧುನೀಕರಣ ಸೇರಿದಂತೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಿಎಂ ಯಡಿಯೂರಪ್ಪ ಎಲ್ಲ ರೀತಿಯ ನೆರವು ನೀಡಿದ್ದಾರೆ ಎಂದು ಬೊಮ್ಮಾಯಿ ಯಡಿಯೂರಪ್ಪ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಕರುನಾಡಿಗೆ ಮತ್ತೆ ನಿರ್ಬಂಧದ ಬರೆ: ವಿದ್ಯಾಗಮ, ಸ್ವಿಮ್ಮಿಂಗ್​​ ಪೂಲ್​, ಜಿಮ್ ಬಂದ್​; ಹೊಸ ನಿಯಮಗಳು ನಿಮಗೆ ತಿಳಿದಿರಲಿ..

ABOUT THE AUTHOR

...view details