ಬೆಂಗಳೂರು: ರಮೇಶ್ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯಬೇಕೋ ಬೇಡವೋ ಎಂಬುದನ್ನು ಎಸ್ ಐಟಿ ನಿರ್ಧರಿಸುತ್ತದೆ. ಕಾನೂನು ಮತ್ತು ಗೃಹ ಸಚಿವನಾದರೂ ಎಸ್ಐಟಿ ತನಿಖೆ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ ಐಟಿ ತನ್ನ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಕಾನೂನಿನ ಪ್ರಕಾರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಅನಗತ್ಯ ಟೀಕೆ, ಪ್ರತಿಭಟನೆ, ಟ್ವೀಟ್, ಮಾಡಿ ಗೊಂದಲ ಸೃಷ್ಟಿಸುತ್ತಿದೆ. ಮೇಟಿ ಪ್ರಕರಣದಲ್ಲಿ ಕನಿಷ್ಠ ಎಫ್ಐಆರ್ ಕೂಡ ಹಾಕಿರಲಿಲ್ಲ. ಈ ಪ್ರಕರಣದಲ್ಲಿ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಪ್ರತಿಭಟನೆ, ಟ್ವೀಟ್, ಟೀಕೆಗಳು ಯಾವುದೂ ಎಸ್ ಐಟಿ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲ, ಸತ್ಯ ಹೊರಬರಬೇಕು ಎಂದರೆ ಎಸ್ಐಟಿ ತನಿಖೆಯಾಗಲೇಬೇಕು, ಹಿರಿಯ ಅಧಿಕಾರಿಗಳಿದ್ದಾರೆ ಅವರು ಯಾರ ಪರ, ವಿರುದ್ಧವೂ ಇಲ್ಲ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ ಎಂದರು.