ಬೆಂಗಳೂರು: ಗಲಭೆಗೆ ಸಿಲುಕಿದ್ದ ಕೆಜಿ ಹಳ್ಳಿ, ಡಿಜಿ ಹಳ್ಳಿ ಪ್ರದೇಶ ಸಂಪೂರ್ಣವಾಗಿ ಪೊಲೀಸ್ ನಿಯಂತ್ರಣದಲ್ಲಿದ್ದು, ಸಿಸಿಟಿವಿ ದೃಶ್ಯಾವಳಿ ನೋಡಿ ದುಷ್ಕರ್ಮಿಗಳ ಪತ್ತೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸದ್ಯ ಸ್ಥಳದಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಎರಡೂ ಠಾಣಾ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಹಾಕಿದ್ದೇವೆ. ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಾಳು ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರಿಗೆ ಸಣ್ಣಪುಟ್ಡ ಗಾಯವಾಗಿವೆ. ಈ ವೇಳೆ ಪೊಲೀಸರಿಗೂ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಉಗ್ರ ಕ್ರಮ: ಪ್ರತಿಭಟನಾಕಾರರಿಗೆ ಗೃಹ ಸಚಿವರ ಎಚ್ಚರಿಕೆ!
ಘಟನಾ ಪ್ರದೇಶದಲ್ಲಿ ನಾಕಾಬಂಧಿ ಹಾಕಿ, ಕೆಎಸ್ಆರ್ಪಿ ಮೊಕ್ಕಾಂ ಹೂಡಿದೆ. ಸಿಸಿಟಿವಿ ಪರಿಶೀಲನೆ ಮಾಡಿ ಘಟನೆಗೆ ಯಾರು ಕಾರಣ ಎಂದು ಪತ್ತೆ ಹಚ್ಚಿ ವಶಕ್ಕೆ ಪಡೆಯುವ ಕೆಲಸ ಮಾಡಲು ಸೂಚಕೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆದಿರುವ ಹಿನ್ನಲೆ ಇದೆ, ಹಿಂದೆ ಸಾಕಷ್ಟು ಘಟನೆ ನಡೆದಿವೆ. ಅಂತಹ ವ್ಯಕ್ತಿಗಳ ಮೇಲೂ ನಿಗಾ ಇರಿಸಲಾಗಿದ್ದು, ಈಗಾಗಲೇ ಕೆಲವರ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತದೆ. ಯಾರೇ ಇರಲಿ, ಯಾವುದೇ ಸಂಘಟನೆ, ವ್ಯಕ್ತಿಯೇ ಆಗಿರಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಧ್ಯ ಎರಡೂ ಠಾಣಾ ವಲಯ ನಮ್ಮ ನಿಯಂತ್ರಣದಲ್ಲಿದ್ದು, ಕಲ್ಲು ತೂರಾಟದ ಜೊತೆ ರಸ್ತೆ ಬದಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇವುಗಳ ಬಗ್ಗೆ ಬೆಳಗ್ಗೆ ಪರೀಶೀಲನೆ ನಡೆಸಿ ಯಾವೆಲ್ಲ ವಾಹನ ಏನು ಇತ್ಯಾದಿ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು. ನಮ್ಮ ಯಾವುದೇ ಸಿಬ್ಬಂದಿ ದುಷ್ಕರ್ಮಿಗಳ ನಡುವೆ ಸಿಕ್ಕಿಹಾಕಿಕೊಂಡಿಲ್ಲ, ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆಧ್ಯತೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಉದ್ವಿಗ್ನ ಪ್ರದೇಶದಲ್ಲಿ ಭದ್ರತೆ, ಮುನ್ನೆಚ್ಚರಿಕೆ ಮುಂದುವರೆಯಲಿದೆ ಎಂದರು.