ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಿಎಂ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಚುನಾವಣೆಗೆ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. ಅದು ಅನರ್ಹ ಶಾಸಕರಿಗೆ ದೊರೆತ ಜಯ. ಕಾಂಗ್ರೆಸ್ ಷಡ್ಯಂತ್ರ ವಿಫಲವಾಗಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಹಾಗೂ ಸೋಮಣ್ಣ ಅಲ್ಲದೇ ಚುನಾವಣೆಗೆ ಬಿಜೆಪಿ ಸಿದ್ಧವಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಳಿದ ಅವಧಿಗೆ ಯಡಿಯೂರಪ್ಪ ಸಿಎಂ ಆಗಿರ್ತಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಅಧಿಕಾರ ಪೂರೈಸಲಿದೆ. ಇದು ನೈತಿಕ ಗೆಲುವು ಎಂದರು.
ನಂತರ ಸಚಿವ ಸೋಮಣ್ಣ ಮಾತನಾಡಿ, ಸುಪ್ರೀಂಕೋರ್ಟ್ ಆದೇಶವನ್ನ ನಾವು ಸ್ವಾಗತಿಸುತ್ತೇವೆ. ಯಾರ್ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಇಂದು ಸಂಜೆ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗುತ್ತದೆ ಎಂದರು.
ಯಡಿಯೂರಪ್ಪ ಮೂರು ತಿಂಗಳಿಂದ ಕೆಲಸ ಮಾಡಿದ್ದಾರೆ. ಉತ್ತಮವಾಗಿ ನೆರೆ ಪರಿಸ್ಥಿತಿ ನಿಭಾಯಿಸಿದ್ದು, ಕೊಟ್ಟಿರುವ ಪರಿಹಾರವನ್ನ ಜನರು ಮೆಚ್ಚಿದ್ದಾರೆ. ಇನ್ನೂ ಮೂರು ವರ್ಷಗಳ ಕಾಲ ಯಡಿಯೂರಪ್ಪನವರ ಸರ್ಕಾರ ಇರುತ್ತೆ. ದೇಶದಲ್ಲಿ ನಂಬರ್ 1 ಅಭಿವೃದ್ಧಿ ಮಾಡಲಾಗುತ್ತದೆ ಎಂದರು.