ಬೆಂಗಳೂರು:ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ನೂತನ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ರಾಜ್ಯದ ಜನತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ಜೊತೆ ಚರ್ಚೆ ಮಾಡಿ ನಂತರವೇ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮವನ್ನು ಒಳಗೊಂಡ ನೂತನ ಮಾರ್ಗಸೂಚಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಎಲ್ಲರೂ ಕೂಡ ಇದಕ್ಕೆ ಸಹಕಾರ ಮಾಡಬೇಕು. ನಿಮ್ಮ ಸಹಕಾರದಲ್ಲಿಯೇ ನಿಮ್ಮ ಆರೋಗ್ಯ, ಸಮಾಜದ ಆರೋಗ್ಯ, ರಾಜ್ಯದ ಆರೋಗ್ಯವೆಲ್ಲವೂ ಇದೆ. ನಾವು ಕಾನೂನು ಮಾಡಿದ್ದರೂ ಕೂಡ ಜಾರಿಗೊಳಿಸಿ ಯಶಸ್ವಿಯಾಗುವುದು ನಿಮ್ಮ ಸಹಕಾರದಿಂದ ಮಾತ್ರ ಎಂದರು.
ಜನತೆಗೆ ಗೃಹ ಸಚಿವ ಬೊಮ್ಮಾಯಿ ಮನವಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ರಾತ್ರಿ ಕರ್ಫ್ಯೂ ಇದ್ದು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಅನಾವಶ್ಯಕವಾಗಿ ಓಡಾಡುವುದನ್ನು ಜನರು ಕಡಿಮೆಮಾಡಬೇಕು. ಮಾರುಕಟ್ಟೆ ಪ್ರದೇಶದಲ್ಲಿ ಸದಾಕಾಲ ಜನರಿಂದ ನೂಕುನುಗ್ಗಲು ಆಗದಂತೆ ನೋಡಿಕೊಳ್ಳಬೇಕು, ಬೇರೆಬೇರೆ ಸಮಯದಲ್ಲಿ ಹೋಗಿ ಖರೀದಿ ಮಾಡಲು ಮುಂದಾಗಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕೆಲಸವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಕೊರೊನಾ ನಿಯಮಗಳ ಪರಿಪಾಲನೆ ಮತ್ತು ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ಕೊಡುವ ಕುರಿತು ಇಂದು ಸಭೆ ನಡೆಸಲಾಗುತ್ತದೆ. ಕೊರೊನಾ ನಿಯಮಗಳ ಕುರಿತು ಎಲ್ಲ ರೀತಿಯ ಶಿಸ್ತಿನ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚೆ ಮಾಡಿ ಇಂದಿನಿಂದ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಡ್ಗೆ ಪರದಾಟ, ಚಿತಾಗಾರದಲ್ಲೂ 'ಹೆಣ'ಗಾಟ: ಬೆಂಗಳೂರಿನಲ್ಲಿ ಪರಿಸ್ಥಿತಿ ಗಂಭೀರ