ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿನ್ನೆಯಷ್ಟೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಡಾ. ಎಲ್ ಮುರುಗನ್ ಬಂದು, ಕನ್ನಡ ಚಿತ್ರರಂಗದ ಸಮಸ್ಯೆಗಳನ್ನ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇಂದು, ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಹಾಗೂ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಮಾತನಾಡಿದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಕನ್ನಡ ಚಿತ್ರರಂಗದಲ್ಲಿ ಪೈರಸಿ ಅನ್ನೋ ಪಿಡುಗು ಹೆಚ್ಚಾಗಿ ಕಾಡ್ತಿದೆ. ಸದ್ಯ ಕೋಟಿಗೊಬ್ಬ 3, ಸಲಗ, ನಿನ್ನ ಸನಿಹಕೆ ಸಿನಿಮಾಗಳಿಗೂ ಪೈರಸಿ ಮಾಡಲಾಯಿತು. ಇದರಿಂದ ಆಯಾ ಸಿನಿಮಾ ನಿರ್ಮಾಪಕರಿಗೆ ತೊಂದರೆ ಆಗಿದೆ.
ನಿರ್ಮಾಪಕರು ಕೋಟ್ಯಂತರ ಬಂಡವಾಳ ಹಾಕುತ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಇವತ್ತು ಪ್ಯಾನ್ ಇಂಡಿಯಾ ಇಂಡಸ್ಟ್ರಿಯಾಗಿದೆ. ಬೇರೆ ಭಾಷೆಯವರು ಇಲ್ಲಿಗೆ ಬಂದು 800-900 ಟಿಕೆಟ್ ದರ ಮಾಡ್ತಿದ್ದಾರೆ. ಸಾಮಾನ್ಯ ಜನ ಸಿನಿಮಾವನ್ನ ಅಷ್ಟು ದರ ಕೊಟ್ಟು ಹೇಗೆ ನೋಡಬೇಕು.