ಬೆಂಗಳೂರು: ಗುಜರಾತ್ವರೆಗೂ ಚೇಸ್ ಮಾಡಿಕೊಂಡು ಹೋಗಿ ಸ್ಯಾಂಟ್ರೋ ರವಿಯನ್ನು ಬಂಧಿಸಿರುವ ನಮ್ಮ ಪೊಲೀಸರ ಕಾರ್ಯವನ್ನು ಶ್ಲಾಘಿಸುವ ಬದಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸ್ಯಾಂಟ್ರೋ ರವಿ ಬಂಧನ ಕುರಿತು ಕುಮಾರಸ್ವಾಮಿಯವರ ಪ್ರತಿಕ್ರಿಯೆ ನೋಡಿದೆ. ರಾಜ್ಯ ಪೊಲೀಸರು ಮಹಾರಾಷ್ಟ್ರದ ಪುಣೆಯಿಂದ ಸ್ಯಾಂಟ್ರೋ ರವಿಯ ಜಾಡು ಹಿಡಿದು ವಡೋದರವರೆಗೂ ಚೇಸ್ ಮಾಡಿಕೊಂಡು ಹೋಗಿ ಅಹಮದಾಬಾದ್, ಗುಜರಾತ್ ಪೊಲೀಸರ ಸಹಾಯ ಪಡೆದು ಬಂಧಿಸಿದ್ದಾರೆ. ರಾಜ್ಯ ಪೊಲೀಸರ ಕ್ಷಮತೆಯನ್ನು ಅಭಿನಂದಿಸಿ, ಹುರಿದುಂಬಿಸುವ ಬದಲು ಕುಮಾರಸ್ವಾಮಿಯವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಈ ಪ್ರವೃತ್ತಿ ಅವರಿಗೆ ಶೋಭೆ ತರುವುದಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ಗೃಹ ಸಚಿವರು ಟೀಕಿಸಿದ್ದಾರೆ.
ಇದನ್ನೂ ಓದಿ:ಉಡುಪಿ: ಸ್ಯಾಂಟ್ರೋ ರವಿ ಬಂಧನ ಖಚಿತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಸ್ಯಾಂಟ್ರೋ ರವಿ ಬಂಧನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸ್ಯಾಂಟ್ರೋ ರವಿಯನ್ನು ಗುಜರಾತ್ನಲ್ಲಿ ಯಾಕೆ ಬಂಧನ ಮಾಡಿದರು ಎಂದು ನನಗೆ ಗೊತ್ತಿಲ್ಲ, ಸ್ಯಾಂಟ್ರೋ ರವಿ ಬಂಧನದಿಂದ ಯಾರು ಯಾರು ಹಿಂದೆ ಇದ್ದಾರೆ ಎಂದು ಕಾದು ನೋಡಬೇಕು. ಯಾರೇ ತಪ್ಪು ಮಾಡಿದ್ದರೂ ಅವರನ್ನು ಬಿಡುವುದಿಲ್ಲ. ಕಾಂಗ್ರೆಸ್ನವರು ಆರೋಪ ಮಾಡುವುದು ತಪ್ಪು. ಕಾನೂನಿನ ದೃಷ್ಟಿಯಲ್ಲಿ ಬಿಜೆಪಿ ಯಾವುದೇ ತಪ್ಪು ಮಾಡೋದಿಲ್ಲ. ಯಾರು ತಪ್ಪು ಮಾಡುತ್ತಾರೋ ಅವರನ್ನ ಬಂಧಿಸುವ ಕೆಲಸವನ್ನ ನಮ್ಮ ಪೊಲೀಸರು ಮಾಡಲಿದ್ದಾರೆ ಎಂದರು.