ಬೆಂಗಳೂರು: ನಗರದಲ್ಲಿ ಕೋವಿಡ್ ಉಲ್ಬಣಗೊಂಡು ಸಂಪೂರ್ಣ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಎದುರಾದರೆ, ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆ 30 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂದು ಪಾದಯಾತ್ರೆ ನಡೆಯುತ್ತಿದ್ದು, ರಾಮನಗರ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಅದಕ್ಕೆ ಕಾರಣಕರ್ತರು ಯಾರು ಅವರ ವಿರುದ್ಧ ಮೊದಲು, ನಂತರ ಉಳಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದಂಡ ಹಾಕುವ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಬ ಇಲ್ಲ. ಇಂದು ಅವರು ಮಾಡಬೇಕಾದ್ದು ಪಾದಯಾತ್ರೆ ಅಲ್ಲ. ನೀರಿನಲ್ಲಿ ಕಿವಿ ಹಿಡಿದು ಕುಳಿತು ಜನರಲ್ಲಿ ದಮ್ಮಯ್ಯ ತಪ್ಪಾಯ್ತು ಅಂತಾ ಕ್ಷಮೆ ಕೇಳಬೇಕು. ಕೊರೊನಾ ಸಂದರ್ಭದಲ್ಲಿ ಇವರು ಈ ರೀತಿ ಮಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಅಸಹಾಯಕರಲ್ಲ
ಡಿ.ಕೆ ಶಿವಕುಮಾರ್ ಹೇಳಿದರು, ನಮಗೆ ಅನುಮತಿ ಬೇಕಿಲ್ಲ ಅಂತಾ. ಅವರು ಹೀಗೆ ಮಾಡಬಾರದಿತ್ತು. ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ. ಒಂದು ರಾಜಕೀಯ ಪಕ್ಷ, ಪಾದಯಾತ್ರೆ ಮಾಡುತ್ತೇವೆ ಎಂದು ಹೊರಟರೆ, ಪೊಲೀಸ್ ಫೋರ್ಸ್ ಇದೆ. ತಡೆ ಹಾಕಲು ಆಗೋದೇ ಇಲ್ಲ ಅಂತಲ್ಲ. ಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು. ಜನರು ಕೂಡ ಕರೆ ಮಾಡ್ತಿದ್ದಾರೆ. ಹೀಗೇ ಮಾಡಬಾರದು ಅಂತಾ ಅವರಿಗೆ ಅರಿವಾಗುತ್ತೆ ಎಂದು ಎದುಕೊಂಡಿದ್ದೆವು ಎಂದು ತಿಳಿಸಿದರು.