ಬೆಂಗಳೂರು:ಬಿಟ್ ಕಾಯಿನ್ ಹಗರಣ ಪ್ರಕರಣದ ತನಿಖೆ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತವಾಗಿದೆ. ಯಾರನ್ನೂ ರಕ್ಷಿಸುವ ಅಥವಾ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಯಾವುದೇ ರೀತಿಯ ಹೊಸ ಸಾಕ್ಷಿ ನೀಡಿದರೂ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ, ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಶಾಸಕ ಶರವಣ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದರು. ಬಿಟ್ ಕಾಯಿನ್ ವಿಷಯದಲ್ಲಿ ಹಲವಾರು ಬಾರಿ ಸದನದಲ್ಲಿ ನಡೆದ ಚರ್ಚೆಗೆ, ಉತ್ತರ ಒದಗಿಸಲಾಗಿದೆ. ಸದಸ್ಯರು ಈ ಕುರಿತು ಯಾವುದೇ ಮಾಹಿತಿ ನೀಡಿದರೆ, ತನಿಖೆ ನಡೆಸಲಾಗುವುದು.
ಸಾಕ್ಷಿ ನೀಡಿದ್ರೆ ಈಗಲೂ ವಿಚಾರಣೆ: ಬಿಟ್ ಕಾಯಿನ್ ವಿವಾದ ಕುರಿತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಯೂ ಅಲ್ಲಿನ ಪೊಲೀಸರು ತನಿಖೆ ನಡೆಸಿದೆ. ಕರ್ನಾಟಕದ ಅಥವಾ ದೇಶದ ಯಾರಾದರೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಸಚಿವರು ತಿಳಿಸಿದರು. ಸರ್ಕಾರ ಮುಕ್ತವಾಗಿದೆ, ಯಾವುದೇ ಸಾಕ್ಷ್ಯ ನೀಡಿದರೆ ಈಗಲೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಕೆಲವರು ಸಾವಿರ ಕೋಟಿ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಂತು. ಆದರೆ ಕಳೆದುಕೊಂಡವರು ಯಾರು? ಅವರು ದೂರು ಕೊಡಬೇಕಲ್ಲವೇ? ನಮ್ಮ ಪೊಲೀಸರಿಗೆ ಮೊದಲು ವಾಲೆಟ್ ನಲ್ಲಿ ಕಾಯಿನ್ ಕಂಡಿತು ನಂತರ ಇರಲಿಲ್ಲ. ಬೇರೆ ಯಾವುದನ್ನೋ ಶ್ರೀಕಿ ತೋರಿಸಿದ್ದಾನೆ. ಈಗಲೂ ಸಾಕ್ಷಿ ಕೊಟ್ಟರೆ ತನಿಖೆ ನಡೆಸಲಾಗುತ್ತದೆ ಎಂದರು.
ತನಿಖೆ ನಡೆಸಲು ಒತ್ತಾಯ: ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಸಾಕ್ಷಿ ನಾವು ಕೊಡಬೇಕಾ, ಪೊಲೀಸರು ಇರುವುದು ಯಾಕೆ? ದೊಡ್ಡ ದೊಡ್ಡ ಕುಳಗಳು ಭಾಗಿಯಾಗಿದ್ದಾರೆ. ಮನಿ ಡಬ್ಲಿಂಗ್ನಲ್ಲಿ ಕಳೆದುಕೊಂಡವರು ದೂರು ಕೊಡುತ್ತಾರಾ? ಇದರಲ್ಲಿಯೂ ಹಾಗೆ. ಸೈಬರ್ ಕ್ರೈಂ ಇದೆ, ವಿಭಾಗ ಇದೆ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ಶರವಣ, ಕನ್ನಡಿಗರಾಗಿ ನಾವು ತಲೆ ತಗ್ಗಿಸಬೇಕಾಗಿದೆ. ಹಾಗಾಗಿ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿ. ಬೇರೆ ರೂಪದಲ್ಲಿ ನೋಟಿಸ್ ನೀಡಿದರೆ ಪರಿಗಣಿಸುವುದಾಗಿ ತಿಳಿಸಿ ಚರ್ಚೆಗೆ ಸಭಾಪತಿಗಳು ತೆರೆ ಎಳೆದರು.