ಬೆಂಗಳೂರು:ಒಂದು ದಿನದ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಿದ್ದು, ಚುನಾವಣಾ ಸಿದ್ಧತೆ ಕುರಿತು ಮಾತುಕತೆ ನಡೆಸಿದರು. ಕಳೆದ ರಾತ್ರಿ ಅಮಿತ್ ಶಾ ಜೊತೆ ಸಭೆ ನಡೆಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕೆಲಕಾಲ ಮಾತುಕತೆ ನಡೆಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಭೇಟಿ ನೀಡಿದರು. ಅಮಿತ್ ಶಾ ದೆಹಲಿಗೆ ತೆರಳುವ ಮುನ್ನ ರಾಜ್ಯ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಿದರು. ರಾಜ್ಯ ಚುನಾವಣೆ ಗೆಲ್ಲುವ ಸಂಬಂಧ ಮಾತುಕತೆ ನಡೆಸಿದ್ದು, ಚುನಾವಣೆ ತಂತ್ರಗಳ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ, ಅಮಿತ್ ಶಾ ಅವನ್ನು ಭೇಟಿ ಮಾಡದೇ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು. ಅಧಿಕೃತ ನಿವಾಸ ಕಾವೇರಿಯಿಂದ ರೇಸ್ ಕೋರ್ಸ್ ರಸ್ತೆ ಮಾರ್ಗವಾಗಿಯೇ ತಾಜ್ ವೆಸ್ಟ್ ಎಂಡ್ ಮುಂದೆಯೇ ಸಾಗಿದರೂ ಹೋಟೆಲ್ಗೆ ತೆರಳಲಿಲ್ಲ, ತಾಜ್ ವೆಸ್ಟೆಂಡ್ ಹೋಟ್ಲ್ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಅವರನ್ನು ರಾಜ್ಯದ ನಾಯಕರು ಭೇಟಿ ಮಾಡಿದರು. ಆದರೆ, ಯಡಿಯೂರಪ್ಪ ಮಾತ್ರ ವಿಧಾನಸೌಧಕ್ಕೆ ತೆರಳಿದರು.