ಕರ್ನಾಟಕ

karnataka

ETV Bharat / state

ಬರ ಪರಿಹಾರ: ಅಮಿತ್ ಶಾ ನೇತೃತ್ವದಲ್ಲಿ ಡಿ.23ರಂದು ಉನ್ನತ ಮಟ್ಟದ ಸಭೆ- ಸಚಿವ ಕೃಷ್ಣ ಬೈರೇಗೌಡ - karnataka drought

ರಾಜ್ಯಕ್ಕೆ ಬರ ಪರಿಹಾರ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಅರ್ಜುನ್​ ಮುಂಡಾ ಅವರನ್ನು ಭೇಟಿಯಾದರು.

home-minister-amit-shah-will-conduct-high-level-meeting-on-drought-minister-krishna-byre-gowda
ರಾಜ್ಯಕ್ಕೆ ಬರ ಪರಿಹಾರ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಅರ್ಜುನ್​ ಮುಂಡಾ ಅವರನ್ನು ಭೇಟಿಯಾದರು.

By ETV Bharat Karnataka Team

Published : Dec 20, 2023, 8:24 PM IST

ನವದೆಹಲಿ/ಬೆಂಗಳೂರು:ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೊಳಿಸುವ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಡಿಸೆಂಬರ್​ 23ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿಯಾದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯವು ಈ ವರ್ಷ ಭೀಕರ ಬರಕ್ಕೆ ತುತ್ತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಸಮಯದಲ್ಲಿ ಅವರಿಗೆ ಪರಿಹಾರ ಧನ ನೀಡಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವಾಗಿ ಕರ್ನಾಟಕದ ಬರ ಪರಿಹಾರ ಮನವಿಯ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಕೇಂದ್ರ ಸಚಿವರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಚರ್ಚೆ

ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಮಿತ್ ಶಾ ಡಿ. 23ರಂದು ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಬೈರೇಗೌಡ ಮಾಹಿತಿ ನೀಡಿದರು.

ರಾಜ್ಯದ ಸಣ್ಣ ರೈತರ ವಾಸ್ತವ ಸಂಖ್ಯೆ ಬಗ್ಗೆ ಮಾಹಿತಿ:ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆಯ ನಿಖರ ಮಾಹಿತಿಯನ್ನು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಲಿರುವ ಬರ ಪರಿಹಾರ ಹಣದ ಮೊತ್ತ ಸಣ್ಣ ರೈತರ ಸಂಖ್ಯೆಗೆ ಅನುಗುಣವಾಗಿರುತ್ತದೆ. ಆದರೆ, ರಾಜ್ಯದ ಸಣ್ಣ ರೈತರ ಸಂಖ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಬಳಿ ವಾಸ್ತವ ಅಂಕಿ-ಅಂಶಗಳಿಲ್ಲ ಎಂದರು.

ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆ ಕೇವಲ ಶೇ.44ರಷ್ಟು ಮಾತ್ರ. ಬರ ಪರಿಹಾರ ಬಿಡುಗಡೆ ಸಂದರ್ಭದಲ್ಲಿ ಈ ಅಂಕಿ-ಅಂಶ ಪರಿಗಣಿಸಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ. ರಾಜ್ಯದ ಸಣ್ಣ ರೈತರ ವಾಸ್ತವ ಸಂಖ್ಯೆ ಶೇ.70ರಿಂದ ಶೇ.75 ಇದೆ. ಈ ಬಗ್ಗೆ ರೈತರ ಆಧಾರ್ ಲಿಂಕ್ ಜೊತೆಗಿನ ನಿಖರ ಅಂಕಿ-ಅಂಶವನ್ನು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ. ಬರ ಪರಿಹಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಅದನ್ನು ಪರಿಗಣಿಸುವಂತೆ ಮನವಿ ಮಾಡಿರುವುದಾಗಿಯೂ ಮಾಹಿತಿ ನೀಡಿದರು.

ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಒತ್ತಾಯ:ಅಮಿತ್ ಶಾ ಭೇಟಿಯ ಬೆನ್ನಿಗೆ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿರುವ ಸಚಿವ ಕೃಷ್ಣ ಬೈರೇಗೌಡ, ಕೊಬ್ಬರಿ ಬೆಳೆಯನ್ನು ಕೇಂದ್ರ ಸರ್ಕಾರವೇ 'ನ್ಯಾಫೆಡ್' ಮುಖಾಂತರ ಖರೀದಿ ಮಾಡಬೇಕು ಎಂದು ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಕೊಬ್ಬರಿ ಬೆಳೆಯುವ ರೈತರು ಅನೇಕರಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಕೊಬ್ಬರಿ ಬೆಳೆಗಾರರಿದ್ದಾರೆ. ಆದರೆ, ಈಗ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದೆ. ಪರಿಣಾಮ ರೈತರು ಸಂಕಷ್ಟಕ್ಕೀಡಾಗಿದ್ಧಾರೆ. ಹೀಗಾಗಿ ಕೇಂದ್ರ ಸರ್ಕಾರ ನ್ಯಾಫೆಡ್ ಮುಖಾಂತರ ಮಾರುಕಟ್ಟೆಯಿಂದ ನೇರವಾಗಿ ಕೊಬ್ಬರಿ ಖರೀದಿಸಬೇಕು. ಈ ಪ್ರಕ್ರಿಯೆ ತಕ್ಷಣ ಆರಂಭವಾಗಬೇಕು. ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾದರೆ, ಬೆಲೆ ತಂತಾನೆ ನಿಯಂತ್ರಣವಾಗುತ್ತದೆ ಎಂದು ಕೇಂದ್ರ ಸಚಿವರ ಬಳಿ ಮನವಿ ಮಾಡಲಾಗಿದೆ ಎಂದರು.

ಬರ ಪರಿಹಾರದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಕೃಷಿ ಸಚಿವರೂ ಓರ್ವ ಸದಸ್ಯರಾಗಿದ್ದು, ಕರ್ನಾಟಕಕ್ಕೆ ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡುವ ಸಂಬಂಧ ಸಭೆಯಲ್ಲಿ ಮಾತನಾಡಲು ಕೋರಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪತ್ರ ಬರೆದಿದ್ದಾರೆ. ಆ ಪತ್ರವನ್ನು ನಾನೇ ನೇರವಾಗಿ ಅರ್ಜುನ್ ಮುಂಡಾ ಅವರಿಗೆ ನೀಡಿದ್ದೇನೆ. ರೈತರ ಸಂಕಷ್ಟವನ್ನು ಬಗೆಹರಿಸಲು ಮನವಿ ಮಾಡಿದ್ದೇನೆ ಎಂದು ಸಚಿವ ಬೈರೇಗೌಡ ತಿಳಿಸಿದರು.

ABOUT THE AUTHOR

...view details