ಕರ್ನಾಟಕ

karnataka

ETV Bharat / state

ರಾಜ್ಯ ನಾಯಕರೊಂದಿಗೆ ಅಮಿತ್ ಶಾ ಮಹತ್ವದ ಸಭೆಯಲ್ಲಿ ಈಶ್ವರಪ್ಪ, ಜಾರಕಿಹೊಳಿ ಭವಿಷ್ಯ ನಿರ್ಧಾರ? - ಚಳಿಗಾಲದ ಅಧಿವೇಶನ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Union Home Minister Amit Shah ,Former CM Yeddyurappa
ಕೇಂದ್ರ ಗೃಹಸಚಿವ ಅಮಿತ ಶಾ ಹಾಗೂ ಮಾಜಿ ಸಿಎಂ ಯಡಿಯೂರಪ್ಪ

By

Published : Dec 29, 2022, 8:15 PM IST

Updated : Dec 29, 2022, 8:23 PM IST

ಬೆಂಗಳೂರು: ಮುಂಬರು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರು ರಾಜ್ಯದ ನಾಯಕರ ಜತೆ ಎರಡು ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ಸರ್ಕಾರಕ್ಕೆ ಸಂಬಂಧಿಸಿದ ಒಂದು ಸಭೆ, ಸಂಘಟನೆಗೆ ಸಂಬಂಧಪಟ್ಟ ಮತ್ತೊಂದು ಸಭೆ ನಡೆಸುವುದಕ್ಕಾಗಿ ಸಮಯ ನಿಗದಿಯಾಗಿದ್ದು, ಸಂಪುಟ ವಿಸ್ತರಣೆ ವಿಷಯಕ್ಕೆ ತೆರೆ ಎಳೆಯುವ ಜತೆಗೆ ಸಂಘಟನಾತ್ಮಕ ಚಟುವಟಿಕೆಗಳ ನೀಲ ನಕಾಶೆ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.

ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರಮೇಶ್ ಜಾರಕಿಹೊಳಿಗೆ ಮರಳಿ ಸಚಿವ ಸ್ಥಾನ ನೀಡುವ ಕುರಿತು ಡಿಸೆಂಬರ್ 30 ರಾತ್ರಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ. ಮಂಡ್ಯ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ವಾಪಸಾಗಲಿರುವ ಅಮಿತ್ ಶಾ, ಅಂದು ರಾತ್ರಿ 8 ರಿಂದ 9.30ರ ವರೆಗೆ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸುವರು.

ಸಿಎಂ ಜತೆ ಪ್ರತ್ಯೇಕ ಸಭೆ: ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪ್ರತ್ಯೇಕವಾಗಿ ಅಮಿತ್ ಶಾ ಮಾತುಕತೆ ನಡೆಸಲಿದ್ದು, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಿರ್ಧಾರ ಹೊರಬೀಳಲಿದೆ. ಪ್ರಸ್ತುತ ಅಧಿವೇಶನದ ಸಮಯದಲ್ಲೇ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದನ್ನು ಹೈಕಮಾಂಡ್ ಈ ಬಾರಿ ಗಂಭೀರವಾಗಿ ಪರಿಗಣಿಸಿದೆ. ಚಳಿಗಾಲದ ಅಧಿವೇಶನ ನಡೆಯುವ ವೇಳೆಯಲ್ಲೇ ಸಿಎಂ ಬೊಮ್ಮಾಯಿಯವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆಯೂ ಆಗಿತ್ತು. ಅಭಿಪ್ರಾಯ ಆಲಿಸಿ ಇಬ್ಬರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಸದ್ಯದಲ್ಲೇ ನಿಲುವು ತಿಳಿಸುವುದಾಗಿ ಸಿಎಂಗೆ ಭರವಸೆ ನೀಡಿತ್ತು. ಅದರಂತೆ ಈಗ ಅಮಿತ್ ಶಾ ಆ ನಿರ್ಧಾರವನ್ನು ತಿಳಿಸಲಿದ್ದಾರೆ.

ಒಟ್ಟು 6 ಸ್ಥಾನಗಳು ಸಂಪುಟದಲ್ಲಿ ಖಾಲಿ ಇದ್ದು ಈಶ್ವರಪ್ಪ, ಜಾರಕಿಹೊಳಿ ಭವಿಷ್ಯ ನಿರ್ಧರಿಸುವುದರೊಂದಿಗೆ ಹೊಸ ಮುಖಗಳಿಗೆ ಮಣೆ ಹಾಕುವ ಹಾಗೂ ಕೆಲವರಿಗೆ ಸಂಪುಟದಿಂದ ಕೊಕ್ ನೀಡಿ ಸಂಘಟನೆಗೆ ಬಳಸಿಕೊಳ್ಳುವ ಕುರಿತೂ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಸದ್ಯ ಇರುವಂತೆಯೇ ಸಂಪುಟದಲ್ಲಿ ಯಾವುದೇ ಬದಲಾವಣೆ ಮಾಡದೆ ಚುನಾವಣೆಗೆ ಹೋಗುವ ಆಯ್ಕೆ, ಇದಕ್ಕೆ ಪ್ರತಿಯಾಗಿ ಈಶ್ವರಪ್ಪ, ಜಾರಕಿಹೊಳಿಗೆ ಬೇರೆ ರೀತಿಯ ಭರವಸೆಯನ್ನು ಹೈಕಮಾಂಡ್​ನಿಂದ ಕೊಡಿಸಿ ಮಹತ್ವದ ಜವಾಬ್ದಾರಿ ಹಂಚಿಕೆ ಮಾಡುವುದು ಅಥವಾ ಈ ಇಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಈ ಎರಡು ಆಯ್ಕೆಯಲ್ಲಿ ಒಂದು ನಿರ್ಧಾರ ಹೊರಬೀಳುವುದು ಖಚಿತ ಎಂದು ಪಕ್ಷದ ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಕುತೂಹಲ: ಸಂಪುಟಕ್ಕೆ ಕೈಹಾಕಿದರೆ ಪಕ್ಷದಲ್ಲಿ ಅಸಮಾಧಾನ ಏಳಲಿದ್ದು ಅದರಿಂದ ಆಗಬಹುದಾದ ಪರಿಣಾಮಗಳನ್ನು ಅವಲೋಕಿಸಿ, ಆಕಾಂಕ್ಷಿಗಳ ಪಟ್ಟಿ, ಪರಿಸ್ಥಿತಿ ಎಲ್ಲವನ್ನೂ ಅವಲೋಕಿಸಿ ಸಂಪುಟ ಸರ್ಕಸ್ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ನಡುವೆ ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ. ಆ ಮೂಲಕ ಬೊಮ್ಮಾಯಿ ಸಂಪುಟ ವಿಚಾರದಲ್ಲಿನ ಕುತೂಹಲಕ್ಕೆ ತೆರೆ ಎಳೆಯಲಾಗುತ್ತದೆ.

ಸಿಎಂ ಜತೆ ನಡೆಯುವ ಸಭೆ ಬಳಿಕ ಪಕ್ಷದ ಪ್ರಮುಖ ನಾಯಕರೊಂದಿಗೂ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಸಿಎಂ ಉಪಸ್ಥಿತಿಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಅಶೋಕ್, ಅಶ್ವತ್ಥನಾರಾಯಣ, ಸಂಘಟನಾ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಪ್ರಮುಖರೊಂದಿಗೆ ಸಂಘಟನಾತ್ಮಕ ವಿಷಯಗಳ ಕುರಿತು ಮಹತ್ವದ ಮಾತುಕತೆ ನಡೆಸುವರು. ಪ್ರಸ್ತುತ ನಡೆಯುತ್ತಿರುವ ಜನಸ್ಪಂದನ ಯಾತ್ರೆ, ರಾಜ್ಯ ಸಮಾವೇಶಗಳ ಪರಿಣಾಮಗಳ ಕುರಿತು ಚರ್ಚಿಸಲಾಗುತ್ತದೆ. ಜನವರಿ 2ರಿಂದ ಜನವರಿ 15ರ ತನಕ ನಡೆಯಲಿರುವ ಬೂತ್ ವಿಜಯ್ ಅಭಿಯಾನದ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗುತ್ತದೆ.

ಸಂಘಟನಾತ್ಮಕ ಜವಾಬ್ದಾರಿ ಹಂಚಿಕೆ: 2022 ಮುಕ್ತಾಯಗೊಳ್ಳುತ್ತಿದ್ದು, 2023ಕ್ಕೆ ಕಾಲಿಡಲಾಗುತ್ತಿದೆ. ಇನ್ನು ಮೂರು ತಿಂಗಳು ಮೈಮರೆಯದೆ ಸಂಘಟನಾತ್ಮಕ ಚುಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಅಮಿತ್ ಶಾ, ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡುವರು. ಕೇಂದ್ರ ನಾಯಕರ ರಾಜ್ಯ ಪ್ರವಾಸದ ವೇಳೆ ಸಮಾರಂಭಗಳ ಆಯೋಜನೆ, ಕಾರ್ಯಕರ್ತರ ಜೋಡಣೆ, ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸುವುದು. ಬೂತ್ ಮಟ್ಟದಿಂದ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಮುಂದಿನ ಮೂರು ತಿಂಗಳ ಸಂಘಟನಾತ್ಮಕ ಚಟುವಟಿಕೆಗಳ ನೀಲನಕ್ಷೆ ಕುರಿತು ಸಭೆಯಲ್ಲಿ ಚರ್ಚಿಸಿ ಚುನಾವಣಾ ಪ್ರಚಾರಕ್ಕೆ ರೂಟ್ ಮ್ಯಾಪ್ ಸಿದ್ದಪಡಿಸಲಾಗುತ್ತದೆ. ಸಂಘಟನಾತ್ಮಕ ಜವಾಬ್ದಾರಿ ಹಂಚಿಕೆಯನ್ನೂ ಇದೇ ವೇಳೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಗ್ಗಟ್ಟಿನ ಮಂತ್ರ: ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಕೂಗು ಕೇಳಿಬರದಂತೆ ನೋಡಿಕೊಳ್ಳಬೇಕು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮೂವರು ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಅವರ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಕೇಂದ್ರದ ಸಚಿವರನ್ನೂ ಪ್ರಚಾರಕ್ಕೆ ಬಳಸಿಕೊಳ್ಳಬೇಕು. ಪಕ್ಷದಲ್ಲಿ ಒಡಕು, ಭಿನ್ನಮತ, ಬಣಗಳಂಥ ಚಟುವಟಿಕೆಗೆ ಆಸ್ಪದ ಕೊಡದೆ ಒಗ್ಗಟ್ಟಾಗಿ ಮುಂದುವರಿಯುವ ಕುರಿತು ಅಮಿತ್ ಶಾ ಒಗ್ಗಟ್ಟಿನ ಮಂತ್ರ ಬೋಧಿಸಲಿದ್ದಾರೆ.

ಉಪಹಾರ ಕೂಟ: ಡಿ. 31 ರಂದು ಬೆಳಗ್ಗೆ 8.30 ರಿಂದ 9.30 ರವರೆಗೆ ಪಕ್ಷದ ಮುಖಂಡರ ಜತೆ ಉಪಹಾರಕೂಟ ನಡೆಸಲಿದ್ದಾರೆ. ಈ ವೇಳೆಯೂ ರಾಜಕೀಯ ವಿಚಾರಗಳ ಕುರಿತು ನಾಯಕರ ಜತೆ ಸಮಾಲೋಚನೆ ನಡೆಸಿ ಸದ್ಯದ ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. ಮಹತ್ವದ ಮಾಹಿತಿಗಳನ್ನು ನಾಯಕರಿಗೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ತನ್ನದೇ ಆದ ಮೂಲಗಳಿಂದ ಮೂರು ಬಾರಿ ರಾಜ್ಯದ ಸಮೀಕ್ಷೆ ನಡೆಸಲಾಗಿದ್ದು, ಅದರ ಮಾಹಿತಿ ಆಧಾರದಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು, ತಿದ್ದಿಕೊಳ್ಳಬೇಕು ಎನ್ನುವ ಅಂಶಗಳನ್ನು ಪ್ರಸ್ತಾಪಿಸುತ್ತಾ, ಯಾವುದೇ ಕಾರಣಕ್ಕೂ ಆಡಳಿತ ವಿರೋಧಿ ಅಲೆ ಏಳಬಾರದು, ಪ್ರತಿಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರಗಳನ್ನು ನೀಡಬೇಕು, ಅಪವಾದಗಳನ್ನು ಮೈಮೇಲೆಳೆದುಕೊಳ್ಳಬಾರದು ಎಂಬ ಸಲಹೆ ಸೂಚನೆಗಳನ್ನು ನೀಡಿ ಚುನಾವಣೆಗೆ ರಾಜ್ಯದ ನಾಯಕರನ್ನ ಅಣಿಗೊಳಿಸಲಿದ್ದಾರೆ. ಒಂದು ರೀತಿಯ ಬೂಸ್ಟರ್ ಡೋಸ್ ರೀತಿ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಚುನಾವಣಾ ಟಾನಿಕ್ ನೀಡಲಿದ್ದಾರೆ.

ಇದನ್ನೂಓದಿ:ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಬಿಸಿ ತಟ್ಟಲಿದೆಯಾ..?

Last Updated : Dec 29, 2022, 8:23 PM IST

ABOUT THE AUTHOR

...view details