ಬೆಂಗಳೂರು:ಜೈಲಿನಿಂದ ಹೊರಗೆ ಬರುವ ಸಂಬಂಧ ನ್ಯಾಯಾಲಯದ ಆದೇಶ ಬಂದ ಬಳಿಕ ಪ್ರಕ್ರಿಯೆಗಳನ್ನು ಮುಗಿಸಿದ ಅರ್ಧ ಗಂಟೆಯಲ್ಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸದನದಲ್ಲಿ ಇಂದು 2021ನೇ ಸಾಲಿನ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಗೃಹ ಸಚಿವರು, ತುರ್ತು ಪರಿಸ್ಥಿತಿ ವೇಳೆ ತಾವು ಅನುಭವಿಸಿದ ಜೈಲಿನ ಅನುಭವ ಕುರಿತು ವಿವರಿಸಿದರು.
ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗೆ ಹಣ ನೀಡಬೇಕಾಯಿತು. ನನ್ನ ಬಳಿ ಇದ್ದ ಎಂಟು ಸಾವಿರ ರೂಪಾಯಿಯನ್ನು ಆತನ ಎದೆಯ ಮೇಲೆ ಹಾಕಿ ಬಂದೆ ಎಂದು ತಾವು ಅನುಭವಿಸಿದ ನೋವುಗಳನ್ನು ಸದನದಲ್ಲಿ ಹಂಚಿಕೊಂಡರು.
ಜೈಲಿನಲ್ಲಿನ ನನ್ನ ಅನುಭವ ಮತ್ತು ಸದನದಲ್ಲಿ ಸದಸ್ಯರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಧಿಕಾರಿಗಳು ಹೇಳಿದ ಮಾತ್ರಕ್ಕೆ ಈ ವಿಧೇಯಕವನ್ನು ತರುತ್ತಿಲ್ಲ. ಕೆಲವು ಸುಧಾರಣೆಗಾಗಿ ವಿಧೇಯಕವನ್ನು ತರಲಾಗಿದೆ. ಜೈಲಿನ ಕೈದಿಗಳ ಮನಪರಿರ್ತನೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೈಲಿನಲ್ಲಿ ಮೊಬೈಲ್, ಮಾರಕಾಸ್ತ್ರಗಳು ಲಭ್ಯವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಕ್ರಮ ಜರುಗಿಸಲಾಗುವುದು ಎಂದರು.
ಹರಿಯಾಣ ರಾಜ್ಯದಲ್ಲಿ ಜೈಲಿನಲ್ಲಿ ಕೈದಿಗಳು ನಿರ್ವಹಿಸುವ ಕೆಲಸದಿಂದ ವರ್ಷಕ್ಕೆ 600 ಕೋಟಿ ರೂ. ನಷ್ಟು ಸರ್ಕಾರದ ಬೊಕ್ಕಸಕ್ಕೆ ಬರುತ್ತಿದೆ. ಅದೇ ರೀತಿ ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಜೈಲಿನ ನಿರ್ವಹಣೆ, ಸುಧಾರಣೆಗಾಗಿ 300ಕ್ಕಿಂತ ಹೆಚ್ಚು ಕೋಟಿ ರೂ. ವೆಚ್ಚ ಮಾಡುತ್ತಿದೆ. ಅಲ್ಲದೆ ಜೈಲಿನಲ್ಲಿ ಭೂಮಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಇದೆ. ಅದನ್ನು ಬಳಸಿಕೊಂಡು ಕೈದಿಗಳಿಂದು ವಿವಿಧ ದುಡಿಮೆ ಮಾಡಿಸಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಹಿಂದೂ, ಮುಸ್ಲಿಂ ಕೈದಿಗಳನ್ನು ಒಂದೆ ಸೆಲ್‌ನಲ್ಲಿ ಹಾಕಿ:
ಕಾಂಗ್ರೆಸ್ ಸದಸ್ಯ ಯುಟಿ ಖಾದರ್ ಮಾತನಾಡಿ, ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಹಿಂದೂ, ಮುಸ್ಲಿಂ ಕೈದಿಗಳನ್ನು ಬೇರೆ ಬೇರೆ ಇಡಲಾಗಿದೆ. ಅವರನ್ನು ಒಂದೇ ಸೆಲ್‌ನಲ್ಲಿ ಹಾಕಿ. ಬೇಕಾದರೆ ಅಲ್ಲಿಯೇ ಬಡಿದಾಡುಕೊಂಡು ಸಾಯಲಿ. ಆದರೆ ಹೊರಗೆ ಬಂದು ಸಮಾಜ ಹಾಳು ಮಾಡುವುದು ಬೇಡ. ಹಿಂದೂ, ಮುಸ್ಲಿಂ ಕೈದಿಗಳನ್ನು ಬೇರೆ ಬೇರೆ ಬ್ಯಾರಕ್‌ನಲ್ಲಿಡುವುದರಿಂದ ಅವರ ಮನಸ್ಥಿತಿಯೂ ಧರ್ಮ ವಿರೋಧಿಯಾಗಿರುತ್ತದೆ. ಅದು ಹೊರಗೆ ಬಂದ ಮೇಲೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಎರಡು ಸಮುದಾಯದವರನ್ನು ಒಂದೇ ಬ್ಯಾರಕ್‌ನಲ್ಲಿ ಹಾಕಿ ಎಂದು ಹೇಳಿದರು.
ಜೈಲಿನಿಂದ ಕರೆ :
ಜೈಲಿನಲ್ಲಿದ್ದ ಕೈದಿಯೊಬ್ಬ ನನಗೆ ಕರೆ ಮಾಡಿ ಸ್ಪಲ್ಪ ದುಡ್ಡು ಕಳಿಸಿ ಅಣ್ಣಾ ಎಂದಿದ್ದ ಎನ್ನುವ ಪ್ರಸಂಗವನ್ನು ಜೆಡಿಎಸ್ ಸದಸ್ಯ ಕೆ. ಅನ್ನದಾನಿ ತೆರೆದಿಟ್ಟರು. ಯಾವುದೋ ಸಣ್ಣ ಪ್ರಕರಣದಲ್ಲಿ ಜೈಲಿಗೆ ಹೋಗಿರುವನೊಬ್ಬ ಕರೆ ಮಾಡಿ ಹಣ ಕೇಳಿದ. ಜೈಲಿನಲ್ಲಿ ಮಾದಕ ವಸ್ತುಗಳು ಸೇರಿದಂತೆ ಎಲ್ಲವೂ ಸಿಗುತ್ತದೆ. ಅಧಿಕಾರಿಗಳೆ ಇದರ ವ್ಯವಸ್ಥೆ ಮಾಡಿ ಕೊಡುತ್ತಾರೆ. ಹೊರಗೆ ಸಿಗುವುದು ಒಳಗೆ ಸಿಕ್ಕರೆ ಕೈದಿಗಳು ಆರಾಮವಾಗಿ ಇರುತ್ತಾರೆ. ಒಳಗೆ ಇರುವಾಗಲೆ ಸಂಚು ರೂಪಿಸಿ ಹಲ್ಲೆ, ಕೊಲೆಗಳನ್ನು ಮಾಡಿಸುತ್ತಾರೆ. ಅಧಿಕಾರಿಗಳ ಬೆಂಬಲ ಇಲ್ಲದೆ ಇದೆಲ್ಲ ನಡೆಯಲು ಸಾಧ್ಯವಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾಜಿ ಸ್ಪೀಕರ್ ಕೆ.ಜೆ.ಬೋಪಯ್ಯ ಮಾತನಾಡಿ, ಈ ಮಂಡಳಿಯಲ್ಲಿ ಅಧಿಕಾರಿಗಳೇ ಇದ್ದರೆ ಉದ್ದೇಶ ಈಡೇರುವುದಿಲ್ಲ. ಸರ್ಕಾರ ನಾಮನಿರ್ದೇಶನ ಮಾಡುವಂತಿರಬೇಕು. ಕ್ಯಾಂಟೀನ್ ನಡೆಸಲು ಹೇಗೆ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅಮೆರಿಕದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೂ ಅಧಿಕವಾಗಿ ಆಗುತ್ತಿದೆ. ಖೈದಿಗಳ ಮಾನವ ಹಕ್ಕುಗಳನ್ನು ಕಾಪಾಡುವಂತಾಗಬೇಕು ಎಂದು ಹೇಳಿದರು.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ಈ ವಿಧೇಯಕ ತಂದಿರುವುದು ಒಳ್ಳೆಯದು. ಜೈಲಿಗೆ ಹೋದವರು ಕುಡಿಯುವುದನ್ನು ಕಲಿಯುತ್ತಾರೆ. ಪರಿಶುದ್ಧರಾಗಿ ಜೈಲಿನಿಂದ ಹೊರಬರು ವಂತಾಗಬೇಕು. ಸಾಮಾನ್ಯ ಕೈದಿಗಳು, ಕ್ರಿಮಿನಲ್ ಕೈದಿಗಳನ್ನು ಪ್ರತ್ಯೇಕವಾಗಿ ಇಡಬೇಕು ಎಂದು ಸಲಹೆ ಮಾಡಿದರು.