ಬೆಂಗಳೂರು:ಸ್ಯಾಂಟ್ರೋ ರವಿ ಪ್ರಕರಣದ ತನಿಖೆಯನ್ನು ಮೈಸೂರು ಪೊಲೀಸರು ನಡೆಸುತ್ತಿದ್ದಾರೆ. ಆದರೆ, ಪಾರದರ್ಶಕವಾಗಿ ತನಿಖೆ ನಡೆಯಬೇಕು. ಯಾವುದೇ ಒತ್ತಡ ಇರಬಾರದು ಎನ್ನುವ ಕಾರಣದಿಂದ ಈ ಪ್ರಕರಣವನ್ನು ಸಿಐಡಿಗೆ ವಹಿಸುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಜಯಮಹಲ್‌ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣದ ತನಿಖೆಯನ್ನು ಸಿಐಡಿ ತಂಡ ಬಹಳ ಉತ್ತಮ ರೀತಿಯಲ್ಲಿ ಮಾಡಿದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನೂ ಅವರಿಗೆ ವಹಿಸಿದ್ದೇವೆ. ಪಿಎಸ್ಐ ಹಗರಣ ತನಿಖೆ ಮಾಡಿದ್ದ ತಂಡವೇ ಈ ಪ್ರಕರಣದ ನೇತೃತ್ವ ವಹಿಸುತ್ತದೆ. ಬದ್ಧತೆಯಿಂದ ಸಿಐಡಿಗೆ ತನಿಖೆ ಜವಾಬ್ದಾರಿ ವಹಿಸಿದ್ದೇವೆ. ಬಹಳ ಚೆನ್ನಾಗಿ ತನಿಖೆ ಮಾಡಬೇಕು, ಅಪರಾಧಿಗೆ ಶಿಕ್ಷೆ ಆಗಬೇಕು. ಆರೋಪಿ ಮೇಲೆ ಈಗ ಅತ್ಯಾಚಾರ, ಕೊಲೆ ಬೆದರಿಕೆ, ಹಲ್ಲೆ, ವರದಕ್ಷಿಣೆ ಕಿರುಕುಳದ ಆರೋಪಗಳಿದ್ದು, ಈ ಎಲ್ಲಾ ಆರೋಪಗಳ ಮೇಲೆ ದಾಖಲಾಗಿರುವ ದೂರುಗಳನ್ವಯವೇ ಪ್ರಕರಣದ ತನಿಖೆ ಆಗುತ್ತದೆ ಎಂದರು.
ಇದು ಗಂಭೀರ ಪ್ರಕರಣವಲ್ಲ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣವಿದು. ಅಲ್ಲದೇ, ಇದನ್ನು ಪಾರದರ್ಶಕವಾಗಿ ತನಿಖೆ ಮಾಡಿ ರವಿ ಮುಖವಾಡ ಕಳಚಿ ಹೊರ ತರಬೇಕು. ಕಳೆದ 20 ವರ್ಷಗಳಲ್ಲಿ ರವಿ ಯಾರೆಲ್ಲರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ, ಇದರಲ್ಲಿ ಏನಾಗಿದೆ ಎನ್ನುವುದು ಈ ಪ್ರಕರಣದ ತನಿಖೆಯಿಂದ ಹೊರಬರಬೇಕು. ಹೀಗಾಗಿ ಸಿಐಡಿ ತನಿಖೆಗೆ ಒಪ್ಪಿಸಿದ್ದೇವೆ. ಆರೋಪಿಯ ಹೆಂಡತಿ ಕೊಟ್ಟ ಪ್ರಕರಣ ಮತ್ತು ಇನ್ನಿತರ ಪ್ರಕರಣದ ಜೊತೆ ಯಾರ ಜೊತೆಗೆ ಆತನ ಸಂಬಂಧ, ವ್ಯವಹಾರ ಇತ್ತು. ಇದೆಲ್ಲ ಸಂಪೂರ್ಣ ತನಿಖೆ ಆಗಬೇಕು ಎಂದು ಸಚಿವರು ತಿಳಿಸಿದರು.
ಪ್ರಕರಣವನ್ನು ಸಿಐಡಿಯಿಂದ ತನಿಖೆ ಮಾಡಿಸಿದರೂ ಕಷ್ಟ, ತನಿಖೆ ಮಾಡಿಸದಿದ್ದರೂ ಕಷ್ಟ. ಸರ್ಕಾರ ಈಗಾಗಲೇ ಸಿಐಡಿಗೆ ಕೊಡುವ ತೀರ್ಮಾನ ತೆಗೆದುಕೊಂಡಿದೆ. ಏನೇನು ದಾಖಲಾತಿ ಇದೆಯೋ ಅದನ್ನು ನೋಡಿಕೊಂಡು ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದನ್ನು ಸಮರ್ಥಿಸಿಕೊಂಡರು.