ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ನಿಯಮ ಪಾಲನೆ ಮಾಡಿದ ಗೃಹರಕ್ಷಕನಿಗೆ ಥಳಿಸಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಚೇನಹಳ್ಳಿ ಪಾರ್ಕ್ನಲ್ಲಿ ಹೋಮ್ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಲ್ಲೆಗೊಳಗಾದವರು. ಕೃತ್ಯ ಎಸಗಿದ ಆರೋಪದಡಿ ಸ್ಥಳೀಯ ನಿವಾಸಿ ರಾಘವೇಂದ್ರ ಎಂಬಾತ ಪೊಲೀಸರ ವಶದಲ್ಲಿದ್ದಾನೆ.
ವಾಕ್ ಮಾಡಬೇಡ ಪಾರ್ಕ್ನಿಂದ ಹೊರಹೋಗು ಎಂದಿದಕ್ಕೆ ಹೋಮ್ಗಾರ್ಡ್ ಮೇಲೆ ಹಲ್ಲೆ ಕೊರೊನಾ ವೈರಸ್ ಹರಡದಂತೆ ತಡೆಯಲು ನಗರದ ಎಲ್ಲಾ ಪಾರ್ಕ್ಗಳಲ್ಲಿ ಮುಂಜಾನೆ 6ರಿಂದ 9 ಗಂಟೆವರೆಗೆ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿತ್ತು.
ಇದರಂತೆ ರಾಚೇನಹಳ್ಳಿ ಕೆರೆ ಪಾರ್ಕ್ನ ಆಡಳಿತ ಮಂಡಳಿಯು ಸರ್ಕಾರ ಆದೇಶ ಅನುಷ್ಠಾನಗೊಳಿಸುವಂತೆ ಗೃಹರಕ್ಷಕರಾಗಿ ನಿಯೋಜನೆಗೊಂಡಿದ್ದ ಮಂಜುನಾಥ್ಗೆ ಸೂಚಿಸಿತ್ತು. ಇದರಂತೆ ಮಂಜುನಾಥ್ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ನಡುವೆ ಪಾರ್ಕಿನಲ್ಲಿ ವಾಕಿಂಗ್ ಅವಧಿ ಮುಗಿದರೂ ವಾಕ್ ಮಾಡುತ್ತಿದ್ದ ರಾಘವೇಂದ್ರನಿಗೆ ಹೊರಗೆ ಹೋಗುವಂತೆ ಗಾರ್ಡ್ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡು ಹೋಮ್ಗಾರ್ಡ್ ವಿರುದ್ಧ ಆರೋಪಿ ಮಾತಿನ ಚಕಮಕಿ ನಡೆಸಿದ್ದಾನೆ.
ಮಾತಿನ ಸಮರ ನಿಧಾನವಾಗಿ ಹೊಡೆಯುವ ಹಂತಕ್ಕೆ ತಲುಪಿ ಕೋಪದಿಂದ ಮಂಜುನಾಥ್ ಮುಖಕ್ಕೆ ರಾಘವೇಂದ್ರ ಕೈಯಿಂದ ಹೊಡೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹಲ್ಲೆ ಮಾಡಿದ ರಭಸಕ್ಕೆ ಮಂಜುನಾಥ್ನ ಎಡಗಣ್ಣು ಉದಿಕೊಂಡಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.