ಬೆಂಗಳೂರು:ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬುಧವಾರ ಬೆಳಗ್ಗೆ ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಲಿದ್ದು, ಹೋಮ, ಹವನ, ಪೂರ್ಣಾಹುತಿ, ಗೋಪೂಜೆ ಮೂಲಕ ಪದಗ್ರಹಣ ಮಾಡಲಿದ್ದಾರೆ. ಇದಕ್ಕಾಗಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸಕಲ ಸಿದ್ದತೆ ಮಾಡಕೊಳ್ಳಲಾಗಿದೆ. ಬೆಳಗ್ಗೆ 9.45ಕ್ಕೆ ನಿಯೋಜಿತ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುತ್ತದೆ.
ನಂತರ ಪಕ್ಷದ ಮುಂಭಾಗ ಗೋಪೂಜೆ ಇರಲಿದೆ. ಬಳಿಕ ಗಣಹೋಮದ ಪೂರ್ಣಾಹುತಿ ಇರಲಿದೆ. ಹಾಲಿ ಅಧ್ಯಕ್ಷರು, ನಿಯೋಜಿತ ಅಧ್ಯಕ್ಷರು ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಳಿಕ ಕಟೀಲ್ ಅವರಿಂದ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರ ಇರಲಿದೆ. ಆ ಬಳಿಕ ನೂತನ ಅಧ್ಯಕ್ಷರಾದ ವಿಜಯೇಂದ್ರ ಮತ್ತು ನಳಿನ್ ಕುಮಾರ್ ಕಟೀಲ್ ಅಪರಾಹ್ನ 12 ಗಂಟೆಗೆ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂಜಿ ಮಹೇಶ್ ಮಾಹಿತಿ ನೀಡಿದ್ದಾರೆ.
ಅಣ್ಣಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ: ಇಂದು ಅಣ್ಣಮ್ಮದೇವಿ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಮ್ಮದೇವಿ ಬೆಂಗಳೂರಿನ ತಾಯಿ ಹಾಗೂ ಗ್ರಾಮ ದೇವತೆ. ಹಾಗಾಗಿ, ಮೊದಲ ಬಾರಿಗೆ ಭೇಟಿ ಕೊಡ್ತಿದ್ದೇನೆ. ದೊಡ್ಡ ಸವಾಲು ನಮ್ಮ ಮುಂದಿದೆ. ಲೋಕಸಭಾ ಚುನಾವಣೆಗೆ ತಯಾರಾಗಬೇಕಿದೆ. ಭೀಕರ ಬರಗಾಲ ಇದೆ. ರಾಜ್ಯ, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಹಾರ ಕೊಡಬೇಕಿದೆ. ಎಲ್ಲರ ವಿಶ್ವಾಸ ಗಳಿಸಬೇಕಿದೆ. ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೋದಿ ಅವರ ವಿಶ್ವಾಸ ಉಳಿಸಿಕ್ಕೊಳ್ಳುವೆ ಎಂದರು.