ವಿನೋದ್ ರಾಜ್ಕುಮಾರ್ ಅವರ ಮನೆಯಲ್ಲಿ ಹೋಮ ನೆಲಮಂಗಲ :ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ ಲೀಲಾವತಿ (87) ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಕೆಲವು ದಿನಗಳಿಂದ ಆರೋಗ್ಯ ಕ್ಷಿಣಿಸುತ್ತಿದೆ. ಇದೀಗ ವಿನೋದ್ ರಾಜ್ ಶ್ರವಣಕುಮಾರನಂತೆ ತಮ್ಮ ಹೆತ್ತ ತಾಯಿಯ ಸೇವೆ ಮಾಡುತ್ತಿದ್ದಾರೆ. ಇದರ ಜೊತೆಗೆ ತಾಯಿ ಆರೋಗ್ಯ ಚೇತರಿಕೆಗಾಗಿ ಮನೆಯಲ್ಲಿ ಹೋಮ ಮಾಡಿಸಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಕಳೆದ 25 ವರ್ಷದಿಂದ ಲೀಲಾವತಿ ತಮ್ಮ ಮಗ ವಿನೋಜ್ ರಾಜ್ ಜೊತೆ ವಾಸವಾಗಿದ್ದಾರೆ. ಕೃಷಿಯ ಬಗ್ಗೆ ಒಲವಿದ್ದ ಅವರು, ಬೆಂಗಳೂರನ್ನು ಬಿಟ್ಟು ಪ್ರಕೃತಿಯ ಒಡಲಲ್ಲಿ ಕೃಷಿಕರಾಗಿ ಬದುಕುವುದನ್ನ ಇಷ್ಟ ಪಟ್ಟರು. ಇದೇ ಕಾರಣಕ್ಕೆ ಬೆಂಗಳೂರು ನಗರದಿಂದ ಸುಮಾರು 40 ಕಿ ಮೀ ದೂರದಲ್ಲಿ ಜಮೀನು ಖರೀದಿ ಮಾಡಿದರು. ಇಲ್ಲಿಯೇ ನೆಲೆಸಿ ಕೃಷಿ ಮಾಡಿದರು. ಮಗ ವಿನೋದ್ ರಾಜ್ಗೂ ಕೃಷಿ ಮಹತ್ವ ಹೇಳಿಕೊಟ್ಟರು.
25 ವರ್ಷಗಳ ಹಿಂದೆ ಬರಡು ಭೂಮಿಯಾಗಿದ್ದ ನೆಲ ಇವತ್ತು ಹಸಿರಿನಿಂದ ಕಂಗೊಳಿಸುತ್ತಿದೆ. ಅದಕ್ಕೆ ಕಾರಣರಾದವರು ಡಾ. ಲೀಲಾವತಿ. ತಮ್ಮ ತೋಟದಲ್ಲಿ ವಿವಿಧ ಬಗೆಯ ಗಿಡ ಮರಗಳನ್ನ ಬೆಳೆಸಿದ್ದಾರೆ. ಬೇರೆಡೆ ಹೋದಾಗ ಅವರಿಗೆ ಕಂಡ ಗಿಡಗಳನ್ನ ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಾರೆ. ಈ ಗಿಡಗಳು ಹೆಮ್ಮರವಾಗಿ ಬೆಳೆದು ಹಣ್ಣುಗಳನ್ನ ನೀಡುತ್ತಿವೆ. ತಾಯಿ ಜೊತೆ ಕೃಷಿಗೆ ಕಾಲಿಟ್ಟ ವಿನೋದ್ ರಾಜ್ ಅವರಿಗೆ ಚಿತ್ರರಂಗವನ್ನೇ ಮರೆಸುವಷ್ಟು ಖುಷಿಯನ್ನ ಕೃಷಿ ಕೊಟ್ಟಿದೆ.
ಡಾ. ಲೀಲಾವತಿಯವರಿಗೆ 87 ವರ್ಷ. ಅವರು ವಯೋಸಹಜ ಕಾಯಿಲೆಗಳಿಂದ ಬಳುತ್ತಿದ್ದಾರೆ. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆಹಾರ ಸೇವನೆ ನಿಲ್ಲಿಸಿದ್ದಾರೆ. ಪೈಪ್ ಮೂಲಕ ಆಹಾರವನ್ನ ಕೊಡಲಾಗುತ್ತಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆಯ ಮಾತನಾಡಿದ್ದಾರೆ. 10 ದಿನಗಳ ನಂತರ ಅವರ ಆರೋಗ್ಯ ಸುಧಾರಿಸಿದರೆ, ಪೈಪ್ ತೆಗೆದು ನೇರವಾಗಿ ಆಹಾರ ನೀಡಲಾಗುವುದು. ಆಗ ಸಾಧ್ಯವಾದರೇ ಅವರ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ ಎಂದಿದ್ದಾರೆ.
ತಾಯಿಯ ಆರೋಗ್ಯ ವೃದ್ಧಿಗಾಗಿ ಮಗ ವಿನೋದ್ ರಾಜ್ ಮನೆಯಲ್ಲಿ ಮೃತ್ಯುಂಜಯ ಹೋಮ, ಗಣ ಹೋಮ, ಹೀಗೆ ಹೋಮ - ಹವನಗಳನ್ನ ಮಾಡಿ ತಾಯಿಯ ಆರೋಗ್ಯಕ್ಕಾಗಿ ದೇವರ ಮೊರೆ ಹೋಗಿದ್ದಾರೆ. ಇದರ ಜೊತೆಗೆ ಹಾಡುವುದರ ಮೂಲಕ ತಾಯಿ ಅವರಲ್ಲಿ ಜೀವನೋತ್ಸವ ತುಂಬುತ್ತಿದ್ದಾರೆ. ಹೆತ್ತ ತಾಯಿಯನ್ನ ಮಗುವಿನ ರೀತಿಯಲ್ಲಿ ಆರೈಕೆ ಮಾಡುತ್ತಿದ್ದಾರೆ.
ನಟ ದರ್ಶನ್ ಭೇಟಿ : ಡಾ. ಲೀಲಾವತಿಯವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರ ಆರೋಗ್ಯ ವಿಚಾರಿಸಲು ಚಿತ್ರರಂಗದ ಹಲವಾರು ನಟ ನಟಿಯರು ತೋಟಕ್ಕೆ ಬಂದು ಹೋಗುತ್ತಿದ್ದಾರೆ. ಇಂದು ನಟ ದರ್ಶನ್ ಕೂಡ ಆಗಮಿಸಿ ವಿನೋದ್ ರಾಜ್ ಜೊತೆಗೆ ಲೀಲಾವತಿಯವರ ಆರೋಗ್ಯ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿ ತೆರಳಿದ್ದಾರೆ. ಅಭಿಷೇಕ್ ಅಂಬರೀಶ್, ಅರ್ಜುನ್ ಸರ್ಜಾ, ಸರೋಜಿನಿದೇವಿ ಸೇರಿದಂತೆ ಹಿರಿಯ ನಟರು ಬಂದು ಹೋಗಿದ್ದಾರೆ.
ಇದನ್ನೂ ಓದಿ :ಅನಾರೋಗ್ಯದ ಮಧ್ಯೆ 'ಕನ್ನಡ' ಫಿಲ್ಮ್ ಚೇಂಬರ್ನಲ್ಲಿ ಧ್ವಜಾರೋಹಣ ನೆರವೇರಿಸಿದ ನಟಿ ಲೀಲಾವತಿ