ಕರ್ನಾಟಕ

karnataka

ETV Bharat / state

ಪೊಲೀಸರಿಗೆ ಸವಾಲಾದ ಬಾಂಬ್ ಬೆದರಿಕೆ ಮೇಲ್; ಬೆಂಗಳೂರಲ್ಲಿ ವರದಿಯಾದ ಪ್ರಕರಣಗಳಿವು

ಬೆಂಗಳೂರಿನಲ್ಲಿ ಶಾಲೆಗಳು ಸೇರಿದಂತೆ ಇತರ ಪ್ರದೇಶಗಲ್ಲಿ ಬಾಂಬ್​ ಬೆದರಿಕೆ ಇ - ಮೇಲ್​ ಬರುತ್ತಿರುವುದು ಪೊಲೀಸ್​ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.

details-on-hoax-bomb-threat-cases-in-bengaluru
ಪೊಲೀಸರಿಗೆ ಸವಾಲಾದ ಬಾಂಬ್ ಬೆದರಿಕೆ ಮೇಲ್; ಬೆಂಗಳೂರಲ್ಲಿ ವರದಿಯಾದ ಪ್ರಕರಣಗಳಿವು

By ETV Bharat Karnataka Team

Published : Dec 2, 2023, 6:43 PM IST

ಬೆಂಗಳೂರು :ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ರವಾನೆಯಾಗಿರುವ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸತೀಶ್ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಯಾವ ದೇಶದಿಂದ ಮೇಲ್ ಬಂದಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಹಿಂದೆಯೂ ಕೆಲವು ಸಲ ಬೆದರಿಕೆ ಬಂದಿದ್ದು, ಅದರಲ್ಲಿಯೂ ಉಗ್ರ ಸಂಘಟನೆಯೊಂದರ ಹೆಸರಿನಲ್ಲಿ ಬೆದರಿಕೆ ಮೇಲ್​ ಮಾಡಿರುವುದು ಆತಂಕ ಮೂಡಿಸಿದೆ. ಈ ಹಿಂದೆಯೂ ಇ-ಮೇಲ್​ಗಳು ಬಂದಿದ್ದು, ಈ ಕುರಿತಾದ ವರದಿ ಇಲ್ಲಿದೆ.

8 ಏಪ್ರಿಲ್ 2022:2022ರ ಏಪ್ರಿಲ್‌ನಲ್ಲಿ ಬೆಂಗಳೂರು ನಗರದ 5 ಹಾಗೂ ಗ್ರಾಮಾಂತರದ 2 ಶಾಲೆಗಳು ಸೇರಿದಂತೆ ಒಟ್ಟು 7 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ರವಾನೆಯಾಗಿದ್ದವು. ಹೆಣ್ಣೂರು, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಏಳು ಖಾಸಗಿ ಶಾಲೆಗಳ ಪಾರ್ಕಿಂಗ್ ಆವರಣ, ಗಾರ್ಡನ್, ಮೇಲ್ಛಾವಣಿಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿತ್ತು. ಪರಿಶೀಲನೆ ನಡೆಸಿದಾಗ ಹುಸಿ ಬೆದರಿಕೆ ಎಂಬುದು ಬಯಲಾಗಿತ್ತು. ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ.

29 ಜುಲೈ 2022:ಕಳೆದ ವರ್ಷ ಜುಲೈ 29ರಂದು ರಾಜರಾಜೇಶ್ವರಿ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಒಡೆತನದ
ಶಾಲೆಗೆ ಬಾಂಬ್ ಬೆದರಿಕೆಯ ಮೇಲ್ ಬಂದಿತ್ತು. ನಂತರ ತನಿಖೆ ನಡೆಸಿದ ಪೊಲೀಸರಿಗೆ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಬೆದರಿಕೆ ಮೇಲ್ ರವಾನಿಸಿದ್ದ ಎಂಬುದು ತಿಳಿದು ಬಂದಿತ್ತು. ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿತ್ತು.

3 ಜನವರಿ 2023:ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಇರಿಸಿರುವುದಾಗಿ ಜನವರಿ 3ರಂದು ಅಪರಿಚಿತ ವ್ಯಕ್ತಿಯೊಬ್ಬ 112ಗೆ ಕರೆ ಮಾಡಿ ಹೇಳಿದ್ದ. ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಬಯಲಾಗಿತ್ತು. ಬಳಿಕ ಆರೋಪಿ ಸುನೀಲ್​ ಎಂಬಾತನನ್ನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಆತ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿಯಾಗಿರುವುದು ಗೊತ್ತಾಗಿತ್ತು. ನ್ಯಾಯಾಲಯಕ್ಕೆ ಅಲೆದು ಅಲೆದು ಬೇಸತ್ತು ಹುಸಿ ಬಾಂಬ್ ಕರೆ ಮಾಡಿದ್ದಾಗಿ ವಿಚಾರಣೆ ವೇಳೆ ಬಯಲಾಗಿತ್ತು.

5 ಜನವರಿ 2023:ರಾಜಾಜಿನಗರದ ಎನ್‌ಪಿಎಸ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆ ಪ್ರಕರಣದಲ್ಲಿಯೂ ಸಹ ಶಾಲೆ ಆವರಣದಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಲಾಗುವುದು ಎಂದು ಈ ಮೇಲ್‌ ರವಾನಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದು ಅಪ್ರಾಪ್ತ ವಿದ್ಯಾರ್ಥಿಯೊಬ್ಬನ ಕೃತ್ಯ ಎಂಬುದನ್ನು ಬಯಲಿಗೆಳೆದಿದ್ದರು.

13 ಜೂನ್ 2023 ಜೂನ್:ಬೆಳ್ಳಂದೂರಿನ ಇಕೋಸ್ಪೇಸ್​​ನಲ್ಲಿರುವ ಐಬಿಡಿಓ ಕಂಪನಿಯಲ್ಲಿ ಬಾಂಬ್ ಇರಿಸಿರುವುದಾಗಿ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ತಕ್ಷಣ ಕಂಪನಿಯವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅದರನ್ವಯ ಪೊಲೀಸರು ಪರಿಶೀಲನೆ ಕೈಗೊಂಡಾಗ ಅದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಬಹಿರಂಗವಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ಳಂದೂರು ಠಾಣೆ ಪೊಲೀಸರು ನವನೀತ್ ಎಂಬ ಆರೋಪಿಯನ್ನ ಬಂಧಿಸಿದ್ದರು. ಅದೇ ಕಂಪನಿಯ ಮಾಜಿ ಉದ್ಯೋಗಿಯಾಗಿದ್ದ ನವನೀತ್, ಟೀಂ ಲೀಡರ್ ಜೊತೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ. ಬಳಿಕ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.

5 ಜುಲೈ 2023:ರಾತ್ರಿ 9:55ರ ಸುಮಾರಿಗೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ್ದ ಅಪರಿಚಿತನೊಬ್ಬ ಶಿವಾಜಿನಗರದ ಮಸೀದಿಗೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಸೀದಿ ಪರಿಶೀಲನೆ ನಡೆಸಿದಾಗ ಯಾವುದೇ ಸ್ಫೋಟಕ ವಸ್ತು ಕಂಡು ಬಂದಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಠಾಣಾ ಪೊಲೀಸರು ಸೈಯ್ಯದ್ ಖಾಜಿ ಮೊಹಮ್ಮದ್ ಅನ್ವರ್ ಎಂಬ ಆರೋಪಿಯನ್ನ ಬಂಧಿಸಿದ್ದರು.

ಮಹಾರಾಷ್ಟ್ರದ ಉಸ್ಮಾನಾಬಾದ್‌ ಮೂಲದ ಸೈಯದ್‌ ಖಾಜಿ ಅವಿವಾಹಿತನಾಗಿದ್ದು, ಬೇರೆ ಬೇರೆ ನಗರಗಳಲ್ಲಿ ಸುತ್ತಾಡುತ್ತ ಭಿಕ್ಷಾಟನೆ ಮಾಡುತ್ತಿದ್ದ. ಬಳಿಕ ಮಸೀದಿಗಳ ಬಳಿ ಆಶ್ರಯ ಪಡೆದು ಅಲ್ಲಿಯೇ ಮಲಗುತ್ತಿದ್ದ. ಜುಲೈ 4ರಂದು ಶಿವಾಜಿನಗರ ಮಸೀದಿ ಬಳಿ ತೆರಳಿ ಅಲ್ಲಿಯೇ ಉಳಿದುಕೊಳ್ಳಲು ಅವಕಾಶ ಕೇಳಿದಾಗ ಭದ್ರತಾ ಸಿಬ್ಬಂದಿ ಹೊರತುಪಡಿಸಿ, ಇತರರಿಗೆ ಅವಕಾಶವಿಲ್ಲ ಎಂದು ಹೇಳಿ ಆತನನ್ನು ಅಲ್ಲಿಂದ ಕಳುಹಿಸಲಾಗಿತ್ತು. ಅದೇ ಕೋಪದಲ್ಲಿ ಜುಲೈ 5 ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮೊಬೈಲ್‌ನಿಂದ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ 'ಮಸೀದಿಯಲ್ಲಿ ಬಾಂಬ್‌ ಇರಿಸಿ ಸ್ಫೋಟಿಸಲು ಕೆಲವರು ಸಂಚು ರೂಪಿಸಿದ್ದಾರೆ' ಎಂದು ಹೇಳಿರುವುದು ಬಹಿರಂಗವಾಗಿತ್ತು.

8 ಆಗಸ್ಟ್ 2023:ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ಗೆ ದುಷ್ಕರ್ಮಿ ಬಾಂಬ್ ಬೆದರಿಕೆಯ ಮೇಲ್ ರವಾನಿಸಿದ್ದ. ನಕಲಿ ಮೇಲ್ ಐಡಿ ಸೃಷ್ಟಿಸಿದ್ದ ಕಿಡಿಗೇಡಿ 10 ಸಾವಿರ ಡಾಲರ್‌ಗಳನ್ನ ಹಾಕಬೇಕು. ಇಲ್ಲವಾದಲ್ಲಿ ನಿಮಗೆ‌ ಸಂಬಂಧಿಸಿದ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಗುವುದು ಎಂದು ಇಂಗ್ಲಿಷ್ ಮತ್ತು ಚೈನೀಸ್ ಭಾಷೆಯಲ್ಲಿ ಮೇಲ್ ಕಳುಹಿಸಿದ್ದ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದ ಬಳಿಕ ಹೋಟೆಲ್ ಪ್ರತಿನಿಧಿಯೊಬ್ಬರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಾಗಿದ್ದು ತನಿಖಾ ಹಂತದಲ್ಲಿದೆ.

ಸದ್ಯ ನಿನ್ನೆ ಬೆಂಗಳೂರು ನಗರದ 48 ಹಾಗೂ ಗ್ರಾಮಾಂತರದ 22 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನಂತರ ಎಲ್ಲಾ ಪ್ರಕರಣಗಳ ಕ್ರೂಢಿಕರಿಸಿ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಶಾಲೆಗಳಿಗೆ ಬಾಂಬ್​ ಬೆದರಿಕೆ ಇ- ಮೇಲ್ ಪ್ರಕರಣ​: ಇಂದು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು

ABOUT THE AUTHOR

...view details