ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಕಿಡಿಗೇಡಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿಯ ನಿವಾಸಿ ಸುನೀಲ್ ಬಂಧಿತ ಆರೋಪಿಯಾಗಿದ್ದಾನೆ. ಕೆಲವು ತಿಂಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಈತ ವಿಚಾರಣೆಯ ಸಲುವಾಗಿ ಕೋರ್ಟ್‌ಗೆ ಹಾಜರಾಗಿ ಹಿಂತಿರುಗುತ್ತಿದ್ದ. ಈ ಸಂದರ್ಭದಲ್ಲಿ ಅಂದರೆ, ಜನವರಿ 3ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್ 112 ಸಂಖ್ಯೆಗೆ ಕರೆ ಮಾಡಿ, ಬೆದರಿಕೆ ಕರೆ ಮಾಡಿದ್ದಾನೆ. ಪೊಲೀಸರು ಬಾಂಬ್ ಪತ್ತೆದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ಕೈಗೊಂಡಿದ್ದರು. ಎಲ್ಲೆಡೆ ಹುಡುಕಾಡಿದಾಗ ಬಾಂಬ್ ಪತ್ತೆಯಾಗಿರಲಿಲ್ಲ. ಕೊನೆಗೆ ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತಪಡಿಸಿದ್ದರು.
ವಿಧಾನಸೌಧ ಪೊಲೀಸರಿಂದ ಆರೋಪಿಯ ಬಂಧನ:ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ವಿಧಾನಸೌಧ ಪೊಲೀಸರು ಆರೋಪಿಯ ಮೊಬೈಲ್ ಸಂಖ್ಯೆ ಆಧರಿಸಿ ಬಂಧಿಸಿದ್ದಾರೆ. ಕಾಡುಗೋಡಿಯಲ್ಲಿ ಈ ಹಿಂದೆ ನಡೆದಿದ್ದ ಪ್ರಕರಣದಲ್ಲಿ ಸುನೀಲ್ ಆರೋಪಿಯಾಗಿದ್ದನು. ಕೋರ್ಟ್‌ಗೆ ಹಲವು ಬಾರಿ ಓಡಾಡಿ ಬೇಸತ್ತಿದ್ದನಂತೆ. ಹೀಗಾಗಿ ದುಷ್ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏರ್ಪೊರ್ಟ್‌ಗೆ ಬಾಂಬ್ ಹಾಕುವುದಾಗಿ ಟ್ವೀಟ್:ಕೆಲ ದಿನಗಳ ಹಿಂದೆ ಬೆಂಗಳೂರು ಏರ್ಪೋರ್ಟ್ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಟ್ವೀಟ್ ಮಾಡಿದ್ದ ವ್ಯಕ್ತಿಯನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರಿನ ಕೂಡ್ಲುಗೇಟ್ ನಿವಾಸಿ ವೈಭವ್ ಗಣೇಶ್ (20) ಬಂಧಿತ. ಈತ ಡಿ.10ರಂದು ತನ್ನ ಟ್ವಿಟರ್ ಖಾತೆಯಲ್ಲಿ, ನಾನು ಬೆಂಗಳೂರು ಏರ್ಪೋರ್ಟ್ಗೆ ಬಾಂಬ್ ಹಾಕುತ್ತೇನೆ ಎಂದು ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದ. ಈ ಟ್ವೀಟ್ ಅನ್ನು ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಖಾತೆಗೂ ಟ್ಯಾಗ್ ಮಾಡಿದ್ದನು.
ಇದನ್ನೂ ಓದಿ:ಭಟ್ಕಳದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ.. ಕಳ್ಳತನ ಮುಚ್ಚಿಡಲು ಹುಸಿ ಬೆದರಿಕೆ ಪತ್ರ!