ಬೆಂಗಳೂರು:ಎಚ್. ವಿಶ್ವನಾಥ್ರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕೋರಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ ಸಿಎಂಗೆ ಪತ್ರ ಬರೆದಿದ್ದಾರೆ.
ಎಚ್. ವಿಶ್ವನಾಥ್ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರಮುಖ ಮತ್ತು ಪ್ರಭಾವಶಾಲಿ ನಾಯಕರಾಗಿದ್ದಾರೆ. ಹಿಂದುಳಿದ ವರ್ಗಗಳ ಸಂಘಟನೆ ಹಾಗೂ ಏಕತೆಗೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜ್ಯದ ಹಿಂದುಳಿದ ವರ್ಗಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಕುರುಬ ಸಮಾಜದ ಅಗ್ರಗಣ್ಯ ನಾಯಕರಾದ ಎಚ್. ವಿಶ್ವನಾಥ್ ಅವರು, ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಪ್ರಥಮ ಅಧ್ಯಕ್ಷರಾಗಿ ಗುರುಪೀಠದ ಸ್ಥಾಪನೆಗೆ ಹಗಲಿರುಳು ಶ್ರಮಿಸಿದವರು ಎಂದು ಪತ್ರದಲ್ಲಿ ರೇವಣ್ಣ ವಿವರಿಸಿದ್ದಾರೆ.
ಅಖಂಡ ಭಾರತದಲ್ಲಿ 13 ಕೋಟಿಗೂ ಹೆಚ್ಚಿರುವ ಕುರುಬ ಸಮಾಜವನ್ನು ರಾಷ್ಟ್ರದಾದ್ಯಂತ ಒಗ್ಗೂಡಿಸಲು ಅಂತರ್ರಾಷ್ಟ್ರೀಯ ಶೆಫರ್ಡ್ ಫೆಡರೇಷನ್ ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ದೇಶದಾದ್ಯಂತ ಯಶ್ವಸಿಯಾಗಿ ಸಂಘಟನೆಯಲ್ಲಿ ನಿರತರಾಗಿದ್ದಾರೆ. 1978 ರಿಂದ ಶಾಸಕರಾಗಿ ಎಚ್. ವಿಶ್ವನಾಥ್ ತಮ್ಮನ್ನು ಜನಸಮುದಾಯದ ಏಳಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಸಚಿವರಾಗಿ ಅವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ಅವರು ಜಾರಿಗೆ ತಂದ ಸಮುದಾಯದತ್ತ ಶಾಲೆ, ಮಧ್ಯಾಹ್ನದ ಬಿಸಿಯೂಟ ಹಾಗೂ ರಾಜ್ಯದ ಶೈಕ್ಷಣಿಕ ವಲಯಗಳ ಸ್ಥಾಪನೆ ಇಂದಿಗೂ ಜನಸಮುದಾಯವನ್ನು ಸಲಹುತ್ತಿವೆ ಎಂದು ತಿಳಿಸಿದ್ದಾರೆ.