ಬೆಂಗಳೂರು: ರಾಜ್ಯದಲ್ಲಿ ಕೋವಿಡ್ಗೆ ಮೃತಪಟ್ಟವರ ಗಣತಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ಮೂಲಕ ಮಾಡಬೇಕು ಎಂದು ಶಾಸಕ ಎಚ್.ಕೆ ಪಾಟೀಲ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಸಾವು ಘೋಷಿಸುವಲ್ಲಿ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ.
ಕೋವಿಡ್ನಿಂದ ಆಸ್ಪತ್ರೆ ದಾಖಲಾಗಿದ್ದು, ಸಾವಿನ ನಂತರ ಮತ್ತೆ ಪರೀಕ್ಷೆ ನಡೆಸಿ ಅದು ನೆಗೆಟಿವ್ ಬಂದರೆ ಕೋವಿಡ್ ಸಾವಲ್ಲ ಎಂದು ಪರಿಗಣಿಸಲಾಗುತ್ತಿದೆ. ಇದು ಪರಿಹಾರ ತಪ್ಪಿಸುವ ಪ್ರಯತ್ನ ಆಗಿದೆ. ಇದು ಸರಿಯಲ್ಲ ಎಂದರು.
ಕೋವಿಡ್ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ ಎಲ್ಲ ವ್ಯಕ್ತಿಗೂ ಪರಿಹಾರ ನೀಡಬೇಕು. ಇದುವರೆಗೆ ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚು ಸಾವು ಆಗಿದೆ. ಆದರೆ, ಅಧಿಕೃತ ವರದಿ ಬೇರೆಯೇ ಇದೆ.
ಆದರೆ, ಇಷ್ಟೊಂದು ಮಂದಿಗೆ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಅಧಿಕೃತ ಅಂಕಿ - ಅಂಶವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ.
ಈ ಹಿನ್ನೆಲೆ ಸಾವಿನ ಅಧಿಕೃತ ಗಣತಿಯ ಕಾರ್ಯ ಆಗಬೇಕು ಎಂದು ಅವರು ಒತ್ತಾಯಿಸಿದರು. ಕೋವಿಡ್ ಮಹಾಮಾರಿಯನ್ನು ರಾಷ್ಟ್ರೀಯ ವಿಪತ್ತು ಎಂದು ವಿಳಂಬವಾಗಿ ಪರಿಗಣಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನಿನ ಅಡಿಯಲ್ಲಿ ನಾಲ್ಕು ಲಕ್ಷ ಪರಿಹಾರ ಕೊಡಬೇಕು ಎಂದಿದೆ.
ಆದರೆ ಕೋವಿಡ್ ನಿಂದ ಸಾವಿಗೀಡಾದ ಸಾರ್ವಜನಿಕರ ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲು ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಕೋವಿಡ್ನಿಂದ ಮೃತ ಪಟ್ಟ ಕುಟುಂಬಗಳಿಗೆ ನಾಲ್ಕು ಲಕ್ಷ ಪರಿಹಾರ ನೀಡುವ ಅಧಿಸೂಚನೆಯನ್ನು ಹಿಂಪಡೆದು ಮಾ.14ಕ್ಕೆ ಮಾರ್ಪಡಿಸಲಾಗಿದೆ. ಇದು ನೊಂದವರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯದ 3.5 ಲಕ್ಷ ಕುಟುಂಬಗಳಿಗೆ ಮನೆ ಒಡೆತನದ ಹಕ್ಕುಪತ್ರ ನೀಡ್ತೇವೆ : ವಸತಿ ಸಚಿವ ವಿ ಸೋಮಣ್ಣ ಘೋಷಣೆ
ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಕೇವಲ ಒಂದು ಲಕ್ಷ ರೂಪಾಯಿ ನೀಡಿದರೆ ಸಾಲುವುದಿಲ್ಲ. ಕನಿಷ್ಠ ನಾಲ್ಕು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ 81,289 ಮಕ್ಕಳಿಗೆ ಕೋವಿಡ್ ಆಗಿದೆ. ಶಿಶು ಮರಣ ಪ್ರಮಾಣ ಶೇ. 2 ಅನ್ನು ದಾಟಿದೆ. ಸುಮಾರು 2000 ಮಕ್ಕಳು ಕೋವಿಡ್ನಿಂದ ಸಾವಿಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಮೂರನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.