ಕರ್ನಾಟಕ

karnataka

ETV Bharat / state

ಸಂವಿಧಾನ ಕುರಿತ ಸ್ಪೀಕರ್​ ಕಾಗೇರಿ ಭಾಷಣ ತಪ್ಪು: ಮಾಜಿ ಸಚಿವ ಹೆಚ್.ಕೆ.ಪಾಟೀಲ್ - h.k patil talk in vidhanasowdha

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಭಾಷಣ ಇತಿಹಾಸವನ್ನು ತಪ್ಪಾಗಿ ದಾಖಲಿಸಿದಂತಾಗುತ್ತದೆ. ಕೂಡಲೇ ಅದನ್ನು ತಿದ್ದುಪಡಿ ಮಾಡಿ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.

h.k patil talk in vidhanasowdha
ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಮಾತು

By

Published : Mar 4, 2020, 7:37 PM IST

ಬೆಂಗಳೂರು:ಸಂವಿಧಾನದ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್.ರಾವ್ ರಚಿಸಿಕೊಟ್ಟಿದ್ದರು. ಅದನ್ನು ಚರ್ಚಿಸಿ ಕೆಲವು ಮಾರ್ಪಾಡುಗಳನ್ನು ಮಾಡಿ, ಭಾರತದ ಸಂವಿಧಾನ ರಚಿಸಲಾಯಿತು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಭಾಷಣ ಇತಿಹಾಸವನ್ನು ತಪ್ಪಾಗಿ ದಾಖಲಿಸಿದಂತಾಗುತ್ತದೆ. ಕೂಡಲೇ ಅದನ್ನು ತಿದ್ದುಪಡಿ ಮಾಡಿ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.

ನಿನ್ನೆ ಕಾಂಗ್ರೆಸ್‍ನ ಶಾಸಕರು ಧರಣಿ ನಡೆಸುತ್ತಿರುವ ವೇಳೆ, ಸಂವಿಧಾನದ ಚರ್ಚೆಗೆ ಚಾಲನೆ ನೀಡಿ ಸ್ಪೀಕರ್ ಭಾಷಣ ಮಾಡಿದ್ದು, ಅದರ 7ನೇ ಪುಟದಲ್ಲಿ ಬಿ.ಎನ್.ರಾವ್ ಅವರ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಶಾಸನ ರಚನಾ ಸಮಿತಿ ಸದಸ್ಯರಾಗಿದ್ದ ಅವರು, ಮೂಲ ಕರಡನ್ನು ರಚಿಸಿಕೊಟ್ಟಿದ್ದರು ಎಂದು ಹೇಳಿರುವುದು ತಪ್ಪಾಗಿದೆ ಎಂದರು.

ಶಾಸಕರು ಈ ರೀತಿ ಮಾತನಾಡಿದ್ದರೆ ಬಿಟ್ಟುಬಿಡಬಹುದಿತ್ತು. ಸ್ಪೀಕರ್ ಪೀಠದಿಂದ ಹೇಳಿಕೆ ಅಧಿಕೃತವಾಗಿ ದಾಖಲಾಗುತ್ತದೆ. ಮುಂದಿನ 10 ವರ್ಷಗಳಲ್ಲಿ ಜನ ಇದನ್ನೇ ಇತಿಹಾಸ ಎಂದು ನಂಬುವಂತಾಗುತ್ತದೆ. ಸ್ಪೀಕರ್ ಆಗುವ ಮೊದಲಿನ ರಾಜಕೀಯ ಪೂರ್ವಾಶ್ರಮದ ಹಿನ್ನೆಲೆ ಕೆಲ ಮಾತುಗಳನ್ನು ಹೇಳಿರಬಹುದು. ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಕಾಂಗ್ರೆಸ್‍ನ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. ನಿಮ್ಮ ರಾಜಕೀಯ ಮನಸ್ಸು ಅದಕ್ಕೆ ಒಪ್ಪದೇ ಇರಬಹುದು. ಆದರೆ ಇತಿಹಾಸ ತಿರುಚಲು ಸಾಧ್ಯವಿಲ್ಲ ಎಂದು ಸ್ಪೀಕರ್ ಕಾಗೇರಿಯವರಿಗೆ ಹೇಳಿದರು.

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಮಾತು

ಬಿ.ಎನ್.ರಾವ್ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಸಂವಿಧಾನದ ಮೂಲ ಪ್ರತಿ ಅವರೇ ಮಾಡಿಕೊಟ್ಟರು ಎಂಬುದು ಸರಿಯಲ್ಲ ಎಂದು ಹೇಳಿದಾಗ, ಬಿಜೆಪಿಯ ಪಿ. ರಾಜೀವ್ ಮಧ್ಯಪ್ರವೇಶಿಸಿ ಭಾರತಕ್ಕೆ ಸ್ವತಂತ್ರವಾದ ಸಂವಿಧಾನ ಬೇಕು ಎಂದು ಮೊದಲು ಪ್ರಸ್ತಾಪಿಸಿದ್ದು ಎಂ.ಎನ್.ರಾಯ್ ಅವರು ಎಂದು ಹೇಳಿದರು. ಅದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಎಂ.ಎನ್. ರಾವ್ ಅವರು ಸಂವಿಧಾನದ ಗುರಿ ಮತ್ತು ಉದ್ದೇಶವನ್ನು ರಚಿಸಿಕೊಟ್ಟಿದ್ದರು. ನೆಹರು ಅದಕ್ಕೆ ಸಮರ್ಥ ರೂಪುರೇಷೆ ಕೊಟ್ಟರು ಎಂದರು.

2011ರಲ್ಲಿ ರಾವ್ ಬಹದ್ದೂರ್ ಎಂಬುವವರು ಅಂಬೇಡ್ಕರ್ ಅವರು ಸಂವಿಧಾನ ಬರೆದೇ ಇಲ್ಲ ಎಂದು ಹೇಳಿದ್ದಾರೆ ಎಂದಾಗ, ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಗುಜರಾತ್ ವಿಧಾನಸಭೆ ಅಧ್ಯಕ್ಷ ತ್ರಿವೇದಿ ಕೂಡ ಇದೇ ರೀತಿ ಹೇಳಿಕೆಯನ್ನು ನೀಡಿದ್ದಾರೆ ಎಂದರು. ಆಗ ಜೆಡಿಎಸ್ ಶಾಸಕರಾದ ಎಲ್.ಆರ್. ಶಿವರಾಮೇಗೌಡ, ಅನ್ನದಾನಿ ಅವರುಗಳು ಸ್ವಾತಂತ್ರ್ಯ ಬಂದು 72 ವರ್ಷವಾಗಿದೆ. ಸಂವಿಧಾನ ಬರೆದವರು ಯಾರು? ಎಂಬುದನ್ನು ಈಗ ಚರ್ಚೆ ಮಾಡಿ ಮಹನೀಯರಿಗೆ ಅಪಮಾನ ಮಾಡುವುದು ಬೇಡ. ಸಂವಿಧಾನದ ಆಶಯಗಳು ಎಷ್ಟರ ಮಟ್ಟಿಗೆ ಈಡೇರಿವೆ, ಏಕೆ ಈಡೇರಿಲ್ಲ ಎಂಬುದರ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಹೇಳಿದರು.

ನಂತರ ಮಾತನಾಡಿದ ಹೆಚ್.ಕೆ.ಪಾಟೀಲ್, ನಾನು ಹೇಳುವ ಕೆಲ ಮಾತುಗಳಿಂದ ವಿಧಾನಸಭಾಧ್ಯಕ್ಷರಿಗೆ ನೋವಾಗಬಹುದು. ಆದರೆ ಇತಿಹಾಸಕ್ಕೆ ಅಪಚಾರ ಮಾಡಬಾರದೆಂಬ ಕಾರಣಕ್ಕೆ ಸಲಹೆ ನೀಡುತ್ತಿದ್ದೇನೆ. ಬಿ.ಎನ್.ರಾವ್ ಸಂವಿಧಾನ ಮೂಲ ಪ್ರತಿ ರಚಿಸಿದರು ಎಂಬ ಹೇಳಿಕೆಯನ್ನು ತಿದ್ದುಪಡಿ ಮಾಡಿ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್‍ ಕುಮಾರ್, ಸಂವಿಧಾನದ ಅಂಗೀಕಾರ ಸಂಸತ್ ಸಭೆಯಲ್ಲಿ ಟಿ.ಟಿ. ಕೃಷ್ಣಮಾಚಾರಿ ಮಾತನಾಡಿ, ಸಂವಿಧಾನದ ಕರಡು ಸಮಿತಿಯಲ್ಲಿದ್ದ 7 ಮಂದಿ ಪೈಕಿ ಒಬ್ಬರು ನಿಧನರಾದರು. ಮತ್ತೊಬ್ಬರು ಅಮೆರಿಕಕ್ಕೆ ಹೋದರು. ಇನ್ನೊಬ್ಬರು ರಾಜಕಾರಣದಲ್ಲಿ ಬ್ಯುಸಿಯಾಗಿದ್ದರು. ಉಳಿದಿಬ್ಬರು ಸಭೆಗೆ ಹೋಗಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಒಬ್ಬರೇ ಶ್ರಮ ಹಾಕಿ ಸಂವಿಧಾನ ರಚಿಸಿದ್ದಾರೆ. ಎಲ್ಲಾ ರೀತಿಯ ಯಶಸ್ಸು ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದಿದ್ದಾರೆ ಎಂದು ಹೇಳಿದರು. ವಿಶ್ವದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ ಅಂಬೇಡ್ಕರ್ ಭಾರತದ ಸಂವಿಧಾನ ರಚಿಸಿದ್ದಾರೆ. ಇದು ಒನ್ ಮ್ಯಾನ್ ಶೋ ಕೆಲಸ ಎಂದಾಗ, ಸ್ಪೀಕರ್ ಕಾಗೇರಿ ಅವರು ನಮ್ಮ ತಪ್ಪುಗಳಿದ್ದರೆ ಸರಿಪಡಿಸುವ ಅಗತ್ಯವಿದೆ ಎಂದು ಉಲ್ಲೇಖಿಸಿದರು.

ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಈ ಸಭೆಯಲ್ಲಿ ಯಾರೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಂತಹ ಮಾತುಗಳನ್ನಾಡಬಾರದು. ಸಂವಿಧಾನ ರಚನೆ ಹಿಂದೆ ಅಂಬೇಡ್ಕರ್ ಅವರ ಶ್ರಮ ಅವಿರತವಾದದ್ದು. 7 ಜನ ಸಮಿತಿ ಸದಸ್ಯರು ಗೈರಾದರೂ ಕೂಡ ಒಬ್ಬರೇ ಶ್ರಮಪಟ್ಟು ಸಂವಿಧಾನ ಬರೆದು ಪೂರ್ಣಗೊಳಿಸಿದ್ದಾರೆ. ತುಳಿತಕ್ಕೊಳಗಾದವರ ಬದುಕು ಹಸನಾಗಬೇಕು ಎಂಬ ಅವರ ಆಶಯ ಈವರೆಗೂ ಈಡೇರಿಲ್ಲ. ಆ ಬಗ್ಗೆ ಚರ್ಚೆ ಮಾಡೋಣ. ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಸಂಪೂರ್ಣ ಗೌರವ ಸಲ್ಲಬೇಕು ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ABOUT THE AUTHOR

...view details