ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ಕೆ.ಆರ್.ಪುರಂನ ಆರ್.ಟಿ.ಒ ಕಚೇರಿ ಮುಂಭಾಗದಲ್ಲಿ ನಡೆದಿದೆ. ಅತಿವೇಗದಲ್ಲಿ ಬಂದ ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫಾಝಿಲಾ ಹಾಗೂ ತಸೀನಾ ಮೃತರು.
ಕೆ.ಆರ್ ಪುರಂ ಮಾರ್ಗವಾಗಿ ಸಾಗುತ್ತಿದ್ದ ಆಟೋದಲ್ಲಿ ಚಾಲಕ ಖಾಲೀದ್, ಆತನ ಪತ್ನಿ ತಾಸೀನಾ, ಫಾಝಿಲಾ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿ ಬಂದ ಕಪ್ಪು ಬಣ್ಣದ ಕಾರೊಂದು ಏಕಾಏಕಿ ಆಟೋಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಎರಡು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
'ರಾತ್ರಿ 9:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಪ್ಪು ಬಣ್ಣದ ಇನ್ನೋವಾ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇಬ್ಬರು ಮಹಿಳೆಯರು ಸ್ಪಾಟ್ ಡೆತ್ ಆಗಿದ್ದಾರೆ. ಒಂದು ಮಗುವಿಗೆ ಗಂಭೀರ ಗಾಯವಾಗಿದೆ. ಕಾರು ಚಾಲಕ ಅಪಘಾತವೆಸಗಿ ಪರಾರಿಯಾಗಿದ್ದಾನೆ' ಎಂದು ಪ್ರತ್ಯಕ್ಷದರ್ಶಿ ಸೈಫ್ ಎಂಬುವರು ತಿಳಿಸಿದ್ದಾರೆ.