ಸಮಸ್ತ ಕನ್ನಡಿಗರಿಗೆ 'ಈಟಿವಿ ಭಾರತ' ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ನಲ್ಮೆಯ ಶುಭಾಶಯಗಳು. ಇಂದು ಕನ್ನಡಿಗರ ಹಬ್ಬ ಅದುವೇ ಕನ್ನಡ ರಾಜ್ಯೋತ್ಸವ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವಿಲೀನ ಮಾಡಲು ಒಪ್ಪಿದರು. ಹೀಗಾಗಿ 1950ರಲ್ಲಿ ಮೈಸೂರು ಭಾರತದ ಒಂದು ರಾಜ್ಯವಾಯಿತು. ದೇಶದಲ್ಲಿ ರಾಜ್ಯಗಳ ವಿಲೀನಿಕರಣ ಪ್ರಕ್ರಿಯೆಯು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು. ನಂತರ 1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತಾಯವಾಯಿತು. ಕೂರ್ಗ್, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು.
ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡಲಾಯಿತು. ಆರಂಭದಲ್ಲಿ 19 ಜಿಲ್ಲೆಗಳು ಕರ್ನಾಟಕದಲ್ಲಿದ್ದವು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಸವಿನೆನಪಿಗಾಗಿಯೇ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. 1950ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾಷೆಯ ಆಧಾರದಲ್ಲಿ ದೇಶದ ಪ್ರಾಂತ್ಯಗಳನ್ನು ರಾಜ್ಯಗಳಾಗಿ ಪುನರ್ವಿಂಗಡನೆ ಮಾಡಲಾಯಿತು.
1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ರಾಜ್ಯದ ಉತ್ತರ ಭಾಗದ ಬಹಳಷ್ಟು ಜನರಿಗೆ ಮೈಸೂರು ರಾಜ್ಯ ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡುವ ಇರಾದೆ ಇತ್ತು. ಹೀಗಾಗಿ 1973ರ ನವೆಂಬರ್ 1ರಂದು ಮೈಸೂರು ರಾಜ್ಯ ಎಂಬುದು ಅಧಿಕೃತವಾಗಿ ಕರ್ನಾಟಕ ರಾಜ್ಯವಾಯಿತು.
ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ರಾಜ್ಯ: ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ಹಾಗೂ ಜನಸಂಖ್ಯೆಯ ಆಧಾರದಲ್ಲಿ 8ನೇ ಅತಿ ದೊಡ್ಡ ರಾಜ್ಯ.