ಕರ್ನಾಟಕ

karnataka

ETV Bharat / state

ಬೆಂಗಳೂರು: ಐತಿಹಾಸಿಕ ಕರಗ ಶಕ್ತ್ಯೋತ್ಸವ ಸಂಭ್ರಮ

ರಾತ್ರಿಯಿಡೀ ನಡೆದ ಕರಗ ಶಕ್ತ್ಯೋತ್ಸವವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

A historic Karaga Shaktyotsava celebrated
ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಕರಗ ಶಕ್ತ್ಯೋತ್ಸವ

By

Published : Apr 7, 2023, 9:50 PM IST

ಬೆಂಗಳೂರು:ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ನಡೆದ ಐತಿಹಾಸಿಕ ಬೆಂಗಳೂರು ಹಬ್ಬವಾಗಿರುವ ಕರಗ ಶಕ್ತ್ಯೋತ್ಸವ ವೈಭವವನ್ನು ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಕಣ್ತುಂಬಿಕೊಂಡರು. ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಸಂಜೆಯವರೆಗೆ ನಗರ್ತಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಜನೆ ಮತ್ತಿತರ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆದಿದ್ದು, ಭಕ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು.

ದೇವಾಲಯದಿಂದ ಮಹಾರಥೋತ್ಸವ ಹೊರಡುತ್ತಿದ್ದಂತೆಯೇ, ಗರ್ಭಗುಡಿಯಿಂದ ದ್ರೌಪದಿದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು. ಗೋವಿಂದಾ.. ಗೋವಿಂದಾ ನಾಮಸ್ಮರಣೆಯೊಂದಿಗೆ ರಾತ್ರಿ 12.30ಕ್ಕೆ ಹೊರಗೆ ಬಂದ ಕರಗದ ದರ್ಶನ ಪಡೆದ ಲಕ್ಷಾಂತರ ಭಕ್ತರು ಭಕ್ತಿಯಲ್ಲಿ ತಲ್ಲೀನರಾದರು.

ಐತಿಹಾಸಿಕ ಪ್ರಸಿದ್ಧಿ ಬೆಂಗಳೂರು ಕರಗ ಶಕ್ತ್ಯೋತ್ಸವ ಗುರುವಾರದ ಮಧ್ಯರಾತ್ರಿ ಆರಂಭವಾಗಿ ಮರುದಿನ ಬೆಳಗಿನ ಜಾವದವರೆಗೂ ನಗರದ ನಾನಾ ಸ್ಥಳಗಳಲ್ಲಿ ಸಾಗುತ್ತಾ ಎಲ್ಲಾ ಭಕ್ತಾದಿಗಳಿಗೂ ಸಂತೃಪ್ತಿಪಡಿಸಿತು. ಸುತ್ತಮುತ್ತಲಿನ ಅಲ್ಲಲ್ಲಿ ಪೆಂಡಾಲ್‌ಗಳನ್ನು ಹಾಕಿ ಜನರಿಗೆ ಕುಡಿಯಲು ಪಾನಕ, ನೀರು, ಮಜ್ಜಿಗೆಗಳ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್‌ನಿಂದ ಕರಗ ಮುಂದುವರೆಯಿತು. ಸಣ್ಣ ರೀತಿಯಲ್ಲಿ ಮಳೆ ಬಂದು ಸಂಪ್ರದಾಯಕ್ಕೆ ಇಂಬು ನೀಡಿದ್ದು ವಿಶೇಷವಾಗಿತ್ತು.

ನೂರಾರು ವರ್ಷಗಳಿಂದ ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಕರಗ ಹೊತ್ತು ಹೆಜ್ಜೆ ಹಾಕತ್ತಾ ದೈವತ್ವಕ್ಕೆ ಸಾಕ್ಷಿಯಾದರು. ವಿಶೇಷವೆಂದರೆ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಸುಮಾರು 40 ಕೆ.ಜಿ ತೂಕದ ಬೆಳ್ಳಿ ಮಿಶ್ರಿತ ಲೋಹದ ಕಿರೀಟವನ್ನು ತಲೆಯ ಮೇಲೆ ಹೊತ್ತು ಸಾಗಿದರು.

ಚೈತ್ರ ಪೌರ್ಣಮಿಯ ಬೆಳಕಿನಲ್ಲಿ ಹೆಂಗಳೆಯರು ತಮ್ಮ ತಮ್ಮ ಮನೆ ಹಾಗೂ ಕರಗ ಹೊರಡುವ ರಸ್ತೆಗಳ ಉದ್ದಕ್ಕೂ ರಂಗೋಲಿ ಹಾಕಿ ಕರಗ ಬರಮಾಡಿಕೊಂಡರು. ಧರ್ಮರಾಯ ದೇವಳದಿಂದ ಹೊರಟ ಕರಗವು ಸಮೀಪದ ಶ್ರೀ ಕೃಷ್ಣ ಸ್ವಾಮಿ ದೇವಾಲಯ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀರಾಮ, ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗಿತು. ನಗರ್ತಪೇಟೆಯ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿಯ ಭೈರೇದೇವರ ದೇವಸ್ಥಾನ, ಮಕ್ಕಳ ಬಸವಣ್ಣನ ಗುಡಿ ಮಾರ್ಗವಾಗಿ ಬಳೇಪೇಟೆಯ ಅಣ್ಣಮ್ಮದೇವಸ್ತಾನಕ್ಕೆ ತೆರಳಿತು. ಬಳಿಕ ಭಾವೈಕ್ಯತೆಯ ಸಂಗಮವಾದ ದರ್ಗಾಕ್ಕೆ ಭೇಟಿ ನೀಡಿತು.

ಮೆರವಣಿಗೆಯಲ್ಲಿ ಸಾಗಿದ ಸುಮಾರು 50 ಕ್ಕೂ ಹೆಚ್ಚಿನ ವೀರಕುಮಾರರು ಕರಗದ ಸುತ್ತಮುತ್ತಲು ಭದ್ರತೆ ಒದಗಿಸಿದರು. ಭಕ್ತರು ಕೂಡ ದೇವರಿಗೆ ನಮಸ್ಕರಿಸುತ್ತಾ ಮಲ್ಲಿಗೆ ಹೂವಿನ ಸುರಿಮಳೆಯನ್ನು ಸುರಿಸಿದರು. ರಾಜ್ಯದ ಹಲವೆಡೆಯಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಈ ಬಾರಿ ವಿಶೇಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕರಗ ಶಕ್ತ್ಯೋತ್ಸವದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾದರು.

ಇದನ್ನೂ ಓದಿ:ಬೆಂಗಳೂರು ಕರಗ: ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಭಕ್ತರು, 20ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

ABOUT THE AUTHOR

...view details