ಬೆಂಗಳೂರು:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ 18ನೇ ಆರೋಪಿ ದೇವಾಡಿಕರ್ ಅಲಿಯಾಸ್ ಮುರಳಿ ಶಿವನ ವಿಚಾರಣೆಯನ್ನ ಎಸ್ಐಟಿ ತಂಡ ಚುರುಕುಗೊಳಿಸಿದೆ.
ಎಸ್ಐಟಿಯ ಹಿರಿಯ ಅಧಿಕಾರಿಗಳು ಸಿಐಡಿ ಕಚೇರಿಯ ಆವರಣದಲ್ಲಿರುವ ಕಚೇರಿಯಲ್ಲಿ ಆರೋಪಿ ರಿಷಿಕೇಶ್ ದೇವಾಡಿರ್ನನ್ನ ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಹಿಂದೂ ವಿರೋಧಿಗಳೆ ಈತನ ಟಾರ್ಗೆಟ್ ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹಿಂದೂ ಧರ್ಮದ ಕುರಿತು ಅವಹೇಳಕಾರಿ ಭಾಷಣ, ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ಟಾರ್ಗೆಟ್ ಮಾಡಿ ಹೊಸ ಹೊಸ ತಂಡ ರಚನೆ ಮಾಡಿ ಹಲವಾರು ಮಂದಿಯನ್ನ ಹತ್ಯೆ ಮಾಡಲು ಫ್ಲಾನ್ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಸದ್ಯ ಈತನ ಬಂಧನದಿಂದ ಮಹಾರಾಷ್ಟ್ರ ಹಾಗೂ ಕೆಲವೆಡೆ ಸಕ್ರಿಯ ಗ್ಯಾಂಗ್ ಕುರಿತು ಎಸ್ಐಟಿ ಮಾಹಿತಿ ಕಲೆಹಾಕಿದ್ದು, ಈತನ ಜೊತೆ ಮತ್ತೋರ್ವ ಸಹಚರ ಇರುವುದಾಗಿ ಗೊತ್ತಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ:ಜಾರ್ಖಂಡ್ ರಾಜ್ಯದ ಧನ್ಬಾದ್ ಜಿಲ್ಲೆಯ ಕತ್ರಾಸ್ನಲ್ಲಿ ಈತ ಅಡಗಿದ್ದ. ಕಳೆದ ವಾರ ಈತನನ್ನ ಬಂಧಿಸಿ ಎಸ್ಐಟಿ ಹೆಚ್ಚಿನ ವಿಚಾರಣೆಗೆ ಎಂದು ವಶಕ್ಕೆ ಪಡೆದಿತ್ತು. ಈತ ಗೌರಿ ಪ್ರಕರಣದಲ್ಲಿ 18ನೇ ಆರೋಪಿಯಾಗಿದ್ದು, ಗೌರಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.