ಬೆಂಗಳೂರು:ಯಾವುದೇ ಮಹತ್ವದ ಆದೇಶ ಮಾಡಬೇಡಿ ಎಂದು ರಾಜ್ಯಪಾಲರು ಸೂಚನೆ ನೀಡಿದ್ದರೂ ಹಿಂದಿನ ದಿನಾಂಕ ನಮೂದಿಸಿ ರಾಜ್ಯ ಸರ್ಕಾರ ಕಡತಗಳ ವಿಲೇವಾರಿಯಲ್ಲಿ ತೊಡಗಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಮಾತನಾಡಿದ ಅವರು, ಅತೃಪ್ತ ಶಾಸಕರು ಮತ್ತು ಮೈತ್ರಿ ಪಕ್ಷಗಳ ಮಧ್ಯೆ ಏನು ನಡೆದಿದೆಯೋ ಗೊತ್ತಿಲ್ಲ. ಅತೃಪ್ತರೇ ತಮ್ಮ ರಾಜೀನಾಮೆಯನ್ನ ಒಪ್ಪಿಕೊಳ್ಳಿ ಅಂತಾ ಕೇಸ್ ಹಾಕಿದ್ದಾರೆ. ಈ ಬೆಳವಣಿಗೆಗೂ, ತಮಗೂ ಸಂಬಂಧವಿಲ್ಲ ಎಂದು ಹೇಳಿದರು.
ಗುರುವಾರ ಬಹುಮತ ಸಾಬೀತಿಗೆ ಸ್ಪೀಕರ್ ದಿನಾಂಕ ನಿಗದಿ ಮಾಡಿದ ಮೇಲೆ ಎಲ್ಲಾ ಮಂತ್ರಿಗಳು ಫುಲ್ ಓವರ್ ಟೈಮ್ ಕೆಲಸ ಮಾಡುತ್ತಿದ್ದಾರೆ. ಹಿಂದಿನ ದಿನಾಂಕ ಬಳಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಆದೇಶ, ಟ್ರಾನ್ಸ್‌ಫರ್, ಪ್ರಮೋಶನ್, ಗ್ರ್ಯಾಂಟ್ ರಿಲೀಸ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಬಹಳ ಸ್ಪಷ್ಟವಾಗಿ ಆದೇಶಿಸಿದ್ದಾರೆ. ಆದರೂ ಕೂಡ ವ್ಯವಹಾರ ಮಾಡಿಕೊಂಡು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸವಾಗುತ್ತಿದೆ. ಹಿಂದಿನ ಡೇಟ್ ಹಾಕಿ ಫೈಲ್ ಕ್ಲಿಯರ್ ಮಾಡುತ್ತಿರುವುದು ನೋಡಿದರೆ ಅವರ ಸರ್ಕಾರದ ಮೇಲೆ ಅವರಿಗೇ ನಂಬಿಕೆಯಿಲ್ಲ ಎಂದು ಬಿಜೆಪಿ ಶಾಸಕ ಬೊಮ್ಮಯಿ ವ್ಯಂಗ್ಯವಾಡಿದರು.