ಕರ್ನಾಟಕ

karnataka

ETV Bharat / state

ದೇಶದ 14 ಭಾಷೆಗಳಲ್ಲಿ ಹಿಂದಿ ಕೂಡ ಒಂದು: ಕನ್ನಡಕ್ಕೆ ನಮ್ಮ ಮೊದಲ ಪ್ರಾತಿನಿಧ್ಯ -ಡಿಕೆಶಿ

ಹಿಂದಿ ಕುರಿತಾಗಿ ಬಾಲಿವುಡ್ ನಟ ಅಜೇಯ್ ದೇವಗನ್ ಟ್ವೀಟ್ ಸೃಷ್ಟಿಸಿದ ವಿವಾದಕ್ಕೆ ಸಂಬಂಧಿಸಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ

By

Published : Apr 28, 2022, 12:44 PM IST

Updated : Apr 28, 2022, 12:53 PM IST

ಬೆಂಗಳೂರು: ನಾವು ಕನ್ನಡಿಗರು ನಮಗೆ ನಮ್ಮದೇ‌ ಆದ ಭಾಷೆ, ನಮ್ಮದೇ ಆದ ಸ್ವಾಭಿಮಾನವಿದೆ. ನಮ್ಮ ಭಾಷೆ, ನೆಲ ಮತ್ತು ಜಲ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಮೊದಲ ನಮ್ಮ ಪ್ರಾತಿನಿಧ್ಯವನ್ನೂ ನಮ್ಮ ಕನ್ನಡ ಭಾಷೆಗೆ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಹಿಂದಿ ಕುರಿತಾಗಿ ಬಾಲಿವುಡ್ ನಟ ಅಜೇಯ್ ದೇವಗನ್ ಟ್ವೀಟ್ ಸೃಷ್ಟಿಸಿದ ವಿವಾದಕ್ಕೆ ಸಂಬಂಧಿಸಿದ್ದಂತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಟ್ವೀಟ್​ಗೂ ಪ್ರತಿಕ್ರಿಯೆ ಮಾಡಲು ನಾನು ಸಿದ್ಧನಿಲ್ಲ. ನಮ್ಮ ದೇಶ ಅನೇಕ ಭಾಷೆಗಳ ಗೂಡಾಗಿದೆ. ಅವರವರಿಗೆ ಅವರವರ ಭಾಷೆ ಬಗ್ಗೆ ಸ್ವಾಭಿಮಾನವಿದೆ. ಮೊದಲು ನಮ್ಮ ಆದ್ಯತೆ ಕನ್ನಡ ಎಂದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ

ನಮ್ಮ ರಾಜ್ಯದಲ್ಲೇ ಕೊಡಗಿಗೆ ಹೋದರೆ ಒಂದು ಭಾಷೆ, ಮಂಗಳೂರಿಗೆ ಹೋದರೆ ಒಂದು ಭಾಷೆ ಇದೆ. ಯಾವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಐನೂರು ರೂಪಾಯಿ ನೋಟಿನಲ್ಲಿ ಎಲ್ಲ ಭಾಷೆಗಳು ಇವೆ. ಕನ್ನಡ, ತೆಲುಗು, ತಮಿಳು ಭಾಷೆ ಇದೆ ಎಂದು ಐನೂರರ ನೋಟು ಪ್ರದರ್ಶನ ಮಾಡಿದರು. ಈ‌ ನೋಟು ಎಲ್ಲ ಕಡೆ ಚಲಾವಣೆ ಆಗುತ್ತದೆ. ಹಿಂದಿ ಬಗ್ಗೆ ಏನು ಗೌರವ ಕೊಡಬೇಕು ಆ ಭಾಗದಲ್ಲಿ ಕೊಡುತ್ತಾರೆ. ಈ ವಿವಾದದ ಬಗ್ಗೆ ಕೇಂದ್ರ ಸಚಿವರು ಯಾರಾದರೂ ಮಾತನಾಡಿದರೆ ಉತ್ತರ ಕೊಡಬಹುದು‌ ಎಂದರು.

ಸಂಸತ್ತಿನಲ್ಲಿ ನಮ್ಮ ಸದಸ್ಯರಿಗೆ ಕನ್ನಡದಲ್ಲಿ ಮಾತನಾಡುವ ಅವಕಾಶ ಇದೆ. ನನ್ನ ಸಹೋದರ ಡಿ.ಕೆ.ಸುರೇಶ್ ಕೂಡಾ ಕನ್ನಡದಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತಾರೆ. ಕೆಲವರು ಇಂಗ್ಲೀಷ್​ನಲ್ಲಿ ಮಾತನಾಡುತ್ತಾರೆ. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಿಂದಿಯಲ್ಲಿ‌ ಭಾಷಣ ಮಾಡುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಗಳು, ರಾಜ್ಯಗಳ ಗೌರವ ಉಳಿಸಲು ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ನಟ ಅಜಯ್ ದೇವಗನ್ ಖ್ಯಾತನಟ. ಸುದೀಪ್ ಕೂಡ ಕನ್ನಡದ ಖ್ಯಾತ ನಟ. ಅಜಯ್ ದೇವಗನ್ ಹಿಂದಿ ರಾಷ್ಟ್ರೀಯ ಭಾಷೆ ಅಂದಿದಾರೆ. ಹಿಂದಿ‌ ರಾಷ್ಟ್ರ ಭಾಷೆ ಅಲ್ಲ. ದೇಶದ 14 ಭಾಷೆಗಳಲ್ಲಿ ಹಿಂದಿ ಕೂಡ ಒಂದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.

ಇದನ್ನೂ ಓದಿ:ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ

Last Updated : Apr 28, 2022, 12:53 PM IST

ABOUT THE AUTHOR

...view details