ಬೆಂಗಳೂರು :ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿರುವ ತ್ರಿಸದಸ್ಯ ಪೀಠ ಆರಂಭಿಸಿದೆ.
ಮಧ್ಯಾಹ್ನ 2.45ಕ್ಕೆ ವಿಚಾರಣೆ ಆರಂಭವಾಗಿದ್ದು, ಇಂದು ಕೂಡ ವಿದ್ಯಾರ್ಥಿನಿಯರ ಪರ ವಕೀಲರು ಹಾಗೂ ಪ್ರಕರಣದಲ್ಲಿ ತಮ್ಮ ವಾದವನ್ನೂ ಆಲಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿರುವವರ ಪರ ವಕೀಲರು ವಾದ ಮಂಡಿಸಲಿದ್ದಾರೆ. ಸದ್ಯ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸುತ್ತಿದ್ದು, ಇಂದು ತಮ್ಮ ವಾದ ಪೂರ್ಣಗೊಳಿಸಲಿದ್ದಾರೆ.
ಇದನ್ನೂ ಓದಿ:ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಆರಗ ಜ್ಞಾನೇಂದ್ರ
ಉರ್ದು ಶಾಲೆಗಳಲ್ಲಿ ಹಿಜಾಬ್ ನಿರ್ಬಂಧ ಆರೋಪ :ವಿಚಾರಣೆ ಆರಂಭದಲ್ಲಿ ಅರ್ಜಿದಾರರ ಪರ ವಕೀಲ ತಾಹೀರ್ ವಾದ ಮಂಡಿಸಿ ರಾಜ್ಯದ ಉರ್ದು ಶಾಲೆಗಳಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ. ಮಾಧ್ಯಮಗಳಲ್ಲಿಯೂ ಈ ಕುರಿತು ವರದಿಯಾಗಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಅಡ್ವೋಕೇಟ್ ಜನರಲ್, ಆರೋಪಗಳನ್ನು ಮಾಡುವುದು ಸರಿಯಲ್ಲ. ಹಾಗೆಯೇ ಈ ಸಂಬಂಧ ಯಾವುದೇ ಅರ್ಜಿಯನ್ನೂ ಸಲ್ಲಿಸಿಲ್ಲ ಎಂದರು.
ಮಧ್ಯಪ್ರವೇಶಿಸಿದ ಪೀಠ, ಈ ಕುರಿತಂತೆ ಸೂಕ್ತ ಅರ್ಜಿ ಸಲ್ಲಿಸಿ ಎಂದು ಪೀಠ ಸಲಹೆ ನೀಡಿತು. ಅಲ್ಲದೇ, ಸೂಕ್ತ ಅರ್ಜಿ ಸಲ್ಲಿಸದೇ ವಾದ ಮಂಡಿಸುವುದು ವೃತ್ತಿ ದುರ್ನಡತೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.